ಸ್ಯಾಂಡಲ್’ ವುಡ್‌ನ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ (Toxic) ಮತ್ತು ರಣ್ವೀರ್ ಸಿಂಗ್ ನಟನೆಯ ಬಾಲಿವುಡ್ ಚಿತ್ರ ‘ಧುರಂಧರ್ 2’ ನಡುವೆ ಏರ್ಪಟ್ಟಿದ್ದ ಬಾಕ್ಸ್ ಆಫೀಸ್ ಪೈಪೋಟಿ ಈಗ ಕುತೂಹಲ ಮೂಡಿಸಿದೆ. ಮೊದಲು ಇವೆರಡೂ ಚಿತ್ರಗಳು ಮಾರ್ಚ್ 19 ರಂದು ಏಕಕಾಲಕ್ಕೆ ಬಿಡುಗಡೆಯಾಗಲಿವೆ ಎನ್ನಲಾಗಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ ‘ಧುರಂಧರ್ 2’ ಚಿತ್ರದ ಬಿಡುಗಡೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ.
‘ಧುರಂಧರ್ 2’ ಚಿತ್ರತಂಡವು ಮಾರ್ಚ್ ಮೊದಲ ವಾರದಲ್ಲಿ ಟ್ರೈಲರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಟ್ರೈಲರ್‌ನಲ್ಲಿಯೇ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತದೆ ಎನ್ನಲಾಗಿದೆ.
ಚಿತ್ರದ ಚಿತ್ರೀಕರಣ ಇನ್ನೂ ಬಾಕಿ ಇರುವುದು ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ತಡವಾಗುತ್ತಿರುವುದು ಬಿಡುಗಡೆ ಮುಂದಕ್ಕೆ ಹೋಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಿಯಮ ಉಲ್ಲಂಘಿಸಿ ಚಿತ್ರೀಕರಣ ನಡೆಸಿದ್ದಕ್ಕಾಗಿ ಚಿತ್ರತಂಡದ ವಿರುದ್ಧ ದೂರು ಕೂಡ ದಾಖಲಾಗಿತ್ತು.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ನಿನ್ನೆಯಷ್ಟೇ ಬಿಡುಗಡೆಯಾಗಿ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿದ್ದು, ಯಶ್ ಲುಕ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.’ಧುರಂಧರ್ 2′ ಚಿತ್ರತಂಡವು ಈಗ ಈದ್ ಹಬ್ಬದ ಸಂದರ್ಭದಲ್ಲಿ ಚಿತ್ರವನ್ನು ತೆರೆಗೆ ತರಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ, ಮಾರ್ಚ್ 19 ರಂದು ನಡೆಯಬೇಕಿದ್ದ ಈ ದೊಡ್ಡ ಮಟ್ಟದ ಮುಖಾಮುಖಿ ಈಗ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಟ್ರೈಲರ್ ಬಿಡುಗಡೆಯಾದ ನಂತರವಷ್ಟೇ ಚಿತ್ರದ ಅಂತಿಮ ಬಿಡುಗಡೆ ದಿನಾಂಕದ ಬಗ್ಗೆ ಸ್ಪಷ್ಟನೆ ಸಿಗಲಿದೆ.

