HomeEntertainmentಅಶ್ಲೀಲ ಸಂದೇಶ ಹಾಗೂ ಕಾಮೆಂಟ್‌ ಪ್ರಕರಣ: ಕೇಸ್ ವಾಪಸ್ ಪಡೆಯಲ್ಲ ಎಂದು ಸ್ಪಷ್ಟನೆ ನೀಡಿದ ರಮ್ಯಾ

ಅಶ್ಲೀಲ ಸಂದೇಶ ಹಾಗೂ ಕಾಮೆಂಟ್‌ ಪ್ರಕರಣ: ಕೇಸ್ ವಾಪಸ್ ಪಡೆಯಲ್ಲ ಎಂದು ಸ್ಪಷ್ಟನೆ ನೀಡಿದ ರಮ್ಯಾ

ಬೆಂಗಳೂರು: ಮಾಜಿ ಸಂಸದೆ, ನಟಿ ರಮ್ಯಾಗೆ ಅಶ್ಲೀಲ ಸಂದೇಶ ಹಾಗೂ ಕಾಮೆಂಟ್‌ಗಳನ್ನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕುಟುಂಬಸ್ಥರು ಕೇಸ್‌ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕೇಸ್‌ ವಾಪಸ್ ಪಡೆಯಲ್ಲ ಎಂದು ನಟಿ ರಮ್ಯಾ ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣದ ವಿಚಾರಣೆ ವೇಳೆ ಬೆಂಗಳೂರಿನ 46ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಆರೋಪಿಗಳ ಕುಟುಂಬಸ್ಥರು ರಮ್ಯಾ ಅವರಲ್ಲಿ ಕ್ಷಮೆ ಕೇಳಿದ್ದಾರೆ. ನಮ್ಮಿಂದ ತಪ್ಪಾಗಿದೆ ಇದೊಂದು ಸಲ ಕ್ಷಮಿಸಿ. ದಯವಿಟ್ಟು ಪ್ರಕರಣ ವಾಪಸ್ ಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ʻʻಇದೊಂದು ಪಾಠ ಆಗಬೇಕು. ನಾನು ಯಾವುದೇ ಕಾರಣಕ್ಕೂ ಕೇಸ್ ವಾಪಸ್ ತೆಗೆದುಕೊಳ್ಳಲ್ಲʼʼ ಎಂದು ಖಡಕ್ಕಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸೋಷಿಯಲ್‌ ಮೀಡಿಯಾ ಹಾಗೂ ಮೊಬೈಲ್‌ ಬಳಸಿಕೊಂಡು ಯಾರ ಬಗ್ಗೆಯಾದರೂ ಮನಬಂದಂತೆ ಕೆಟ್ಟದಾಗಿ ಕಾಮೆಂಟ್ ಮಾಡುವುದು ಸರಿಯಲ್ಲ. ʻಒಬ್ಬ ಹೆಣ್ಣುಮಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಮೊದಲು ಸಾವಿರ ಬಾರಿ ಯೋಚಿಸುವಂತಾಗಬೇಕು. ಈ ಪ್ರಕರಣ ಎಲ್ಲರಿಗೂ ಒಂದು ಪಾಠವಾಗಬೇಕು ಎಂದು ನಟಿ ಹೇಳಿದ್ದಾರೆ.

ಅಲ್ಲದೇ ಪ್ರಕರಣದಲ್ಲಿ ಎಷ್ಟು ಬಾರಿ ಸಾಕ್ಷ್ಯ ಹೇಳಲು ಕರೆದರೂ ನ್ಯಾಯಾಲಯಕ್ಕೆ ಬಂದು ಸಾಕ್ಷ್ಯ ನೀಡಲು ಸಿದ್ಧವಿದ್ದೇನೆ. ಆದರೆ, ಆರೋಪಿಗಳನ್ನ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಟ ದರ್ಶನ್ ಅವರ ಅಭಿಮಾನಿಗಳು ಎನ್ನಲಾದ ಆರೋಪಿಗಳು ರಮ್ಯಾಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದರು. ವಿಚಾರಣೆ ವೇಳೆ ಕೋರ್ಟ್ ಆವರಣದಲ್ಲಿ ನಟಿ ರಮ್ಯಾ ಅವರ ಕಾಲಿಗೆ ಬಿದ್ದು, ‘ಇದೊಂದು ಬಾರಿ ಕ್ಷಮಿಸಿಬಿಡಿ, ನಮ್ಮಿಂದ ದೊಡ್ಡ ತಪ್ಪಾಗಿದೆ’ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಕಳೆದ ವಿಚಾರಣೆಯ ವೇಳೆಯೂ ಆರೋಪಿಗಳು ಇದೇ ರೀತಿ ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡಿದ್ದರು. ಈ ಬಾರಿ ಆರೋಪಿಗಳ ಕುಟುಂಬದವರೂ ಕೂಡ ರಮ್ಯಾ ಅವರ ಬಳಿ ಬಂದು ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸುವಂತೆ ವಿನಂತಿಸಿಕೊಂಡರು.

ಆದರೆ, ಆರೋಪಿಗಳ ಈ ಕ್ಷಮಾಪಣೆಯನ್ನು ಕಟ್ಟುನಿಟ್ಟಾಗಿ ತಿರಸ್ಕರಿಸಿರುವ ನಟಿ ರಮ್ಯಾ ತಮ್ಮ ನಿಲುವಿನಲ್ಲಿ ಕೊಂಚವೂ ಸಡಲಿಕೆ ತೋರಿಲ್ಲ. ‘ಕೈಯಲ್ಲಿ ಮೊಬೈಲ್ ಇದೆ, ಇಂಟರ್ನೆಟ್ ಸಿಗುತ್ತದೆ ಎಂಬ ಕಾರಣಕ್ಕೆ ಯಾರ ವಿರುದ್ಧ, ಹೇಗೆ ಬೇಕಾದರೂ ಅಶ್ಲೀಲವಾಗಿ ಕಾಮೆಂಟ್ ಹಾಕಬಹುದಾ? ನಾನು ಯಾವುದೇ ಕಾರಣಕ್ಕೂ ಈ ಕೇಸ್ ವಾಪಸ್ ಪಡೆಯುವುದಿಲ್ಲ’ ಎಂದು ಖಡಕ್ ಉತ್ತರ ನೀಡಿದ್ದಾರೆ.

ರಮ್ಯಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೆಟ್ಟ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂದೇಶಗಳನ್ನು ರವಾನಿಸಲಾಗಿತ್ತು. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ರಮ್ಯಾ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ತೀವ್ರ ತನಿಖೆ ನಡೆಸಿ, ನಿಂದನೆ ಮಾಡಿದ್ದ ಹಲವು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ವಿಚಾರಣೆ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular