ಬೆಂಗಳೂರು: ‘ಇಂದಿರಾ ಕಿಟ್’ ಯೋಜನೆ ಅನುಷ್ಠಾನಗೊಳ್ಳದಿರುವುದರ ಹಿಂದೆ ಬರಿ ಬೆಲೆ ಏರಿಕೆಯ ನೆಪ ಮಾತ್ರವಲ್ಲ, ಬೃಹತ್ ಕಮಿಷನ್ ದಂಧೆ ಮತ್ತು ಸರ್ಕಾರದ ಹಣಕಾಸು ದಿವಾಳಿತನ ಅಡಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಕಮಿಷನ್ ಡೀಲ್ ಕುದುರಲಿಲ್ಲವೇ ಅಥವಾ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆಯೇ? ಎಂದು ಪ್ರಶ್ನಿಸಿರುವ ಅವರು, ಅನ್ನಭಾಗ್ಯದಡಿ ಉಚಿತ ಅಕ್ಕಿ ಕೊಡಲು ಯೋಗ್ಯತೆಯಿಲ್ಲದೆ ಬಜೆಟ್ ನಲ್ಲಿ ‘ಇಂದಿರಾ ಕಿಟ್’ ಎಂಬ ಗಿಮಿಕ್ ಘೋಷಿಸಿದ ಸರ್ಕಾರ, ಒಂದು ವರ್ಷ ಕಳೆದರೂ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ ಎಂದರೆ ಇದರರ್ಥವೇನು ಎಂದು ಕೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿ ಬಡವರ ಯೋಜನೆಗಳಿಗೆ ಹಣವಿಲ್ಲದಂತಾಗಿದೆಯೇ? ಅಥವಾ ಈ ‘ಇಂದಿರಾ ಕಿಟ್’ ಟೆಂಡರ್‌ನಲ್ಲಿ ನಿರೀಕ್ಷಿತ ಮಟ್ಟದ ಕಮಿಷನ್ ಪರ್ಸಂಟೇಜ್ ಡೀಲ್ ಕುದುರಲಿಲ್ಲವೇ? ನಿಮ್ಮ ಸರ್ಕಾರದ ಆದ್ಯತೆ ಬಡವರ ಹಸಿವು ನೀಗಿಸುವುದೋ ಅಥವಾ ಕಮಿಷನ್ ಬಾಚುವುದೋ ಎಂದು ಪ್ರಶ್ನಿಸಿದ್ದಾರೆ.
ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರೇ, ಬೆಲೆ ಏರಿಕೆಯ ನೆಪ ಹೇಳಿ ಯೋಜನೆಯನ್ನೇ ಕೈಬಿಡಲು ಹೊರಟಿರುವದರ ಹಿಂದಿನ ಅಸಲಿ ಕಾರಣವೇನು? ಅಸಲಿ ಉದ್ದೇಶವೇನು? ಟೆಂಡರ್ ಪ್ರಕ್ರಿಯೆಯನ್ನು ಬೇಕಂತಲೇ ವಿಳಂಬಗೊಳಿಸಿ, ಹಿಂಬಾಗಿಲ ಮೂಲಕ ನಿಮಗಿಷ್ಟ ಬಂದವರಿಗೆ ಗುತ್ತಿಗೆ ನೀಡಿ ಪರ್ಸಂಟೇಜ್ ಹೊಡೆಯುವ ಸಂಚು ನಡೆಯುತ್ತಿದೆಯೇ ಎಂದಿದ್ದಾರೆ.
ಬಡವರ ಹೆಸರಿನಲ್ಲಿ ರಾಜಕೀಯ ಲಾಭ ಗಿಟ್ಟಿಸಲು ಹೊರಟ ಕಾಂಗ್ರೆಸ್ ಸರ್ಕಾರ, ಈಗ ಕಮಿಷನ್ ಸಿಗಲಿಲ್ಲವೆಂದು ಯೋಜನೆಯನ್ನೇ ಕೈಬಿಡಲು ಹೊರಟಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಲಜ್ಜೆಗೇಡಿತನಕ್ಕೆ ಮತ್ತೊಂದು ಉದಾಹರಣೆ. ಕೊಟ್ಟ ಮಾತಿನಂತೆ ತಕ್ಷಣವೇ ಪಾರದರ್ಶಕವಾಗಿ ‘ಇಂದಿರಾ ಕಿಟ್’ ವಿತರಣೆ ಆರಂಭಿಸಿ. ಇಲ್ಲವಾದಲ್ಲಿ ಈ ಕಮಿಷನ್ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸುವುದು ಖಚಿತ ಎಂದು ತಿಳಿಸಿದ್ದಾರೆ.
ಟಾರ್ಚ್ ಬೆಳಕಿನಲ್ಲಿ ಸರ್ಕಾರಿ ಬಸ್ ಪ್ರಯಾಣ!
ಕಲಬುರಗಿಯಿಂದ ಚಿಂಚೋಳಿಗೆ ಪ್ರಯಾಣಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (KKRTC) ಬಸ್‌ನ ಹೆಡ್‌ಲೈಟ್ ಕೆಟ್ಟುಹೋಗಿ, ಮೊಬೈಲ್ ಫೋನ್ ಟಾರ್ಚ್ ಬೆಳಕಿನಲ್ಲಿ ಚಾಲಕ ಬಸ್ ಚಲಾಯಿಸುವ ಪರಿಸ್ಥಿತಿ ಬಂದೊದಗಿತ್ತು.
ಈ ಘಟನೆ ಮಾಸುವ ಮುನ್ನವೇ ಧಾರವಾಡ ಜಿಲ್ಲೆಯ ಕುಂದಗೋಳದಲ್ಲೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ (NWKRTC) ಬಸ್‌ನ ಹೆಡ್‌ಲೈಟ್ ಕೈಕೊಟ್ಟು, ಕತ್ತಲಿನಲ್ಲಿ ಮೊಬೈಲ್ ಟಾರ್ಚ್ ಆಸರೆಯಲ್ಲೇ ಚಾಲಕ ಪ್ರಯಾಣಿಕರನ್ನು ತಲುಪಿಸಬೇಕಾಯಿತು. ಪ್ರಯಾಣಿಕರ ಜೀವವನ್ನು ಪಣಕ್ಕಿಟ್ಟು ಬಸ್ಸುಗಳನ್ನು ರಸ್ತೆಗೆ ಇಳಿಸುತ್ತಿರುವ ಈ ನಾಲಾಯಕ್ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಜನಸಾಮಾನ್ಯರ ಭದ್ರತೆಯ ಬಗ್ಗೆ ಕನಿಷ್ಠ ಕಾಳಜಿಯಾದರೂ ಇದೆಯೇ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರೇ, ನಿಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಇಷ್ಟು ದಯನೀಯವಾಗಿದೆ. ಮೈಕು ಸಿಕ್ಕರೆ ಸಾಕು ದೇಶ-ವಿದೇಶದ ಉಸಾಬರಿ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ನಿಮಗೆ ಜನಸಾಮಾನ್ಯರಿಗೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಾರಿಗೆ ಸಚಿವ ಬೈರತಿ ಸುರೇಶ್ ಅವರೇ, ಬಸ್ ಗಳ ಸೂಕ್ತ ನಿರ್ವಹಣೆ ಇಲ್ಲದೆ ಚಾಲಕರು ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ. ನಿಮ್ಮ ದಿವಾಳಿ ಆಡಳಿತಕ್ಕೆ ಜನರು ಪ್ರಾಣಾಪಾಯಕ್ಕೆ ಸಿಲುಕಬೇಕೆ?
ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ನೀಡಿದ ಮಾತ್ರಕ್ಕೆ ಜನಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲವೇ? ಉಚಿತ ಪ್ರಯಾಣ ನೀಡುತ್ತಿದ್ದೇವೆ ಎಂಬ ನೆಪದಲ್ಲಿ ಕನಿಷ್ಠ ರಕ್ಷಣೆ ಇಲ್ಲದ ಬಸ್ಸುಗಳನ್ನು ನೀಡಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದೀರಾ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಹಾಳಾಗಿರುವ ಎಲ್ಲಾ ಸಾರಿಗೆ ಬಸ್ಸುಗಳನ್ನು ತಪಾಸಣೆಗೊಳಪಡಿಸಿ, ದುರಸ್ತಿಪಡಿಸಬೇಕು. ಇಲ್ಲವಾದಲ್ಲಿ ಈ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಹಾಗೂ ಸಚಿವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

