ಕಳೆದ ವಾರ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ರಮೇಶ್ ವಿಶ್ವಾಸ್ ಕುಮಾರ್ ಆರೋಗ್ಯದಲ್ಲಿ ಚೇತರಿಕ ಕಂಡು ಬಂದಿದ್ದು, ಅವರನ್ನು ಸಿವಿಲ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಕುಮಾರ್ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿದ್ದು, ಅವರು 241 ಸಹ ಪ್ರಯಾಣಿಕರನ್ನು ಬಲಿತೆಗೆದುಕೊಂಡ ಅಹಮದಾಬಾದ್ ವಿಮಾನ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದರು. ಅವರು ಜೀವಂತವಾಗಿ ಹೊರನಡೆಯುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ದಿಗ್ಭ್ರಮೆಗೊಳಿಸಿದೆ.
ವಿಮಾನದ ಮ್ಯಾನಿಫೆಸ್ಟ್ ಪ್ರಕಾರ ರಮೇಶ್ 11A ನಲ್ಲಿ ಕುಳಿತಿದ್ದರು. ಅವರು ಹೇಗೆ ಬದುಕುಳಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಅಪಘಾತದ ನಂತರ ವಿಮಾನದ ಭಾಗಗಳು ಹಾಗೆಯೇ ಇದ್ದವು ಎಂದು ವರದಿಯಾಗಿದೆ. ಅಪಘಾತದ ಸ್ವಲ್ಪ ಸಮಯದ ನಂತರ ತೆಗೆದ ದೃಶ್ಯಗಳಲ್ಲಿ ರಮೇಶ್ ಜೀವಂತವಾಗಿ ಆಂಬ್ಯುಲೆನ್ಸ್ ಕಡೆಗೆ ಕುಂಟುತ್ತಾ ಬರುತ್ತಿರುವುದನ್ನು ತೋರಿಸಲಾಗಿದೆ.

