ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದುಕೊಂಡು ಮಹಿಳೆ ಜತೆ ರಾಸಲೀಲೆ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಘಟನೆ ಬೆನ್ನಲ್ಲೇ ಆರೋಪಿ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ತನಿಖೆ ಬಳಿಕ ಅವರನ್ನು ಡಿಸ್ ಮಿಸ್ ಕೂಡ ಮಾಡಬಹುದು. ಇಂತಹ ಕೃತ್ಯವನ್ನು ಇಲಾಖೆ ಸಹಿಸಲ್ಲ, ಒಪ್ಪಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ಪ್ರಕರಣ ಈಗ ಬೆಳಕಿಗೆ ಬಂದಿದ್ದು, ಭಾರಿ ಸುದ್ದಿಯಾಗಿದೆ. ಈ ಹಿಂದೆ ಕೂಡ ಅವರ ವಿರುದ್ಧ ಸಾಕಷ್ಟು ಗಂಭೀರ ಆರೋಪಗಳು, ಪ್ರಕರಣಗಳು ಇವೆ.
ರಾಮಚಂದ್ರ ರಾವ್ ಅವರ ಮಲಮಗಳು ನಟಿ ರನ್ಯಾ ರಾವ್ ಅಕ್ರಮ ಚಿನ್ನ ಕಳ್ಳಸಾಗಣೆ, ದರೋಡೆ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಹಣ ದುರ್ಬಳಕೆ ಸೇರಿದಂತೆ ಅನೇಕ ಆರೋಪಗಳು ಅವರ ವಿರುದ್ಧ ಇರುವುದು ಬೆಳಕಿಗೆ ಬಂದಿದೆ.
ಡಾ. ಕೆ ರಾಮಚಂದ್ರ ರಾವ್ ಮೂಲತಃ ಆಂಧ್ರ ಪ್ರದೇಶದ ಗುಂಟೂರಿನವರು. 1993 ರ ಬ್ಯಾಚ್ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. ತಮ್ಮ ವೃತ್ತಿಪರ ಜೀವನದ ಬಹುಪಾಲು ಕರ್ನಾಟಕದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿದ್ದಾರೆ. ದಾವಣಗೆರೆ, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ,ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2023 ರ ಸೆಪ್ಟೆಂಬರ್ನಲ್ಲಿ ಡಿಜಿಪಿ ಹುದ್ದೆಗೆ ಬಡ್ತಿ ಪಡೆದಿದ್ದರು. ರಾಸಲೀಲೆ ಪ್ರಕರಣದಲ್ಲಿ ಅಮಾನತಾಗುವ ಸಂದರ್ಭದಲ್ಲಿ ಅವರು ಕರ್ನಾಟಕದ ನಾಗರಿಕ ಹಕ್ಕುಗಳ ಜಾರಿ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಯಲ್ಲಿದ್ದರು.
ಡಿಜಿಪಿ ರಾಮಚಂದ್ರ ರಾವ್ ಎರಡನೇ ಮದುವೆಯಾಗಿದ್ದರು. ಎರಡನೇ ಪತ್ನಿಯ ಮೊದಲ ಪತಿ ಮಗಳೇ ನಟಿ ರನ್ಯಾ ರಾವ್. ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಸಿಕ್ಕಿ ಬಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಳೆ. ದುಬೈನಿಂದ 14.2 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಮಚಂದ್ರ ರಾವ್ ಮಲಮಗಳು ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿಯೂ ರಾಮಚಮ್ದ್ರ ರಾವ್ ಹೆಸರು ತಳುಕು ಹಾಕಿಕೊಂಡಿತ್ತು. ಬಳಿಕ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು.
2025 ರ ಆಗಸ್ಟ್ನಲ್ಲಿ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು. ಮಲಮಗಳು ರನ್ಯಾ ರಾವ್ ಳಿಂದ ದೂರವಿದ್ದು, ಆಕೆ ಜತೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸಂಪರ್ಕವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
2014ರಲ್ಲಿ ಮೈಸೂರಿನ ಇಲವಾಲದಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ವಶ ಪಡಿಸಿಕೊಂಡಿದ್ದ ಹಣವನ್ನು ದುರ್ಬಳಕೆ ಮಾಡಿದ್ದ ಆರೋಪ ಕೂಡ ರಾಮಚಂದ್ರ ರಾವ್ ವಿರುದ್ಧ ಕೇಳಿಬಂದಿತ್ತು. ಬಸ್ಸಿನಲ್ಲಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿಗೂ ಹೆಚ್ಚಿನ ಹಣ ದರೋಡೆಯಾಗಿತ್ತು. ಆಗ ರಾಮಚಂದ್ರ ರಾವ್ ದಕ್ಷಿಣ ವಲಯದ ಐಜಿಪಿ ಆಗಿದ್ದರು. ದರೋಡೆ ಮಾಡಿದ್ದವರಿಂದ ವಶಕ್ಕೆ ಪಡೆಯಲಾಗಿದ್ದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಇದೇ ಪ್ರಕರಣದಲ್ಲಿ ರಾಮಚಂದ್ರ ರಾವ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸಿಐಡಿ ತನಿಖೆ ಕೂಡ ನಡೆದಿತ್ತು. ಆದರೆ ಆರೋಪ ಸಾಬೀತಾಗಿರಲಿಲ್ಲ. ಹಾಗಾಗಿ ಪ್ರಕರಣ ವಜಾಗೊಂಡಿತ್ತು.
2017 ರ ನವೆಂಬರ್ 30 ರಂದು ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ ಚಡಚಣ ಸಂಶಯಾಸ್ಪದ ಪೊಲೀಸ್ ಎನ್‌ಕೌಂಟರ್ ಮತ್ತು ಗಂಗಾಧರ ಚಡಚಣ ಸಂಶಯಾಸ್ಪದ ಕೊಲೆ ಪ್ರಕರಣಗಳಲ್ಲಿ ರಾಮಚಂದ್ರ ರಾವ್ ಹೆಸರು ಕೇಳಿಬಂದಿತ್ತು. ಈ ಪ್ರಕರಣವನ್ನು ಕೂಡ ಸಿಐಡಿ ತನಿಖೆಗೆ ವಹಿಸಲಾಗಿತ್ತು, ತನಿಖೆ ವೇಳೆ ರಾಮಚಂದ್ರರಾವ್ ಪಾತ್ರವಿಲ್ಲ ಎಂಬುದು ಸಾಬೀತಾಗಿತ್ತು. ಇದೀಗ ರಾಮಚಂದ್ರರಾವ್ ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಎಂಟು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಐಜಿಪಿಯಾಗಿದ್ದಾಗ ದೂರು ನೀಡಲು ಬಂದಿದ್ದ ಮಹಿಳೆಯ ಜೊತೆಯೇ ಕಚೇರಿಯಲ್ಲಿಯೇ ಅಶ್ಲೀಲವಾಗಿ ವರ್ತಿಸಿ ರಾಸಲೀಲೆ ನಡೆಸಿದ್ದ ಪ್ರಕರಣ ಇದೀಗ ಬಟಾಬಯಲಾಗಿದೆ.

