ಬೆಂಗಳೂರು: ಬಿಡಿಎ ಜಾಗದಲ್ಲಿರುವ ಅಕ್ರಮ ಮನೆಗಳ ಸಕ್ರಮಗೊಳಿಸಲು ಮಾರ್ಗಸೂಚಿ ದರದ ಆಧಾರದಲ್ಲಿ ಶುಲ್ಕ ಸಂಗ್ರಹಿಸಿ ಸಕ್ರಮಗೊಳಿಸುವ ಬಿಲ್ ಗೆ ರಾಜ್ಯಪಾಲರು ಅಂಗೀಕಾರ ಸೂಚಿಸಿದ್ದಾರೆ.
ಬಿಡಿಎ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅನುಭೋಗದಲ್ಲಿರುವ ಸಾರ್ವಜನಿಕರಿಂದ ಆಸ್ತಿ ಮಾರ್ಗಸೂಚಿ ದರದ ಆಧಾರದಲ್ಲಿ ಶುಲ್ಕ ಸಂಗ್ರಹಿಸಿ ಸಕ್ರಮಗೊಳಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಅಧಿನಿಯಮ 2026ಕ್ಕೆ ರಾಜ್ಯಪಾಲರು ಅಂಗೀಕಾರ ನೀಡಿದ್ದಾರೆ. ಇದನ್ನು ಅಧಿಕೃತ ರಾಜ್ಯ ಪತ್ರದಲ್ಲಿ ಹೊರಡಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ಸೆಕ್ಷನ್ 38ಡಿ ಅಡಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ನಿಯಮಬಾಹರ ಅನಧಿಕೃತವಾಗಿ ಮನೆ ಅಥವಾ ಕಟ್ಟಡ ನಿರ್ಮಿಸಿದವರಿಗೆ ಅದನ್ನು ಸಕ್ರಮ ಮಾಡಿಕೊಳ್ಳಲು ಮತ್ತು ಕಾನೂನುಬದ್ಧ ಮಾಲೀಕತ್ವ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ.
ಈ ತಿದ್ದುಪಡಿ ವಿಧೇಯಕದ ಮೂಲಕ ಈ ಹಿಂದೆ ನಿಗದಿಪಡಿಸಲಾಗಿದ್ದ ಶುಲ್ಕದಲ್ಲಿ ಶೇಕಡ 50ರಷ್ಟು ಇಳಿಕೆ ಮಾಡಲಾಗಿದೆ. ಮೂಲ ಅಧಿನಿಯಮದ ಸೆಕ್ಷನ್ 10ರಲ್ಲಿ ಇದ್ದ ಆಡಳಿತಾತ್ಮಕ ವೆಚ್ಚದ ಮಿತಿಯನ್ನು 50 ಲಕ್ಷ ರೂ.ಗಳಿಂದ ಐದು ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಅನಧಿಕೃತ ಕಟ್ಟಡಗಳ ಸಕ್ರಮ ದರಗಳ ಸೆಕ್ಷನ್ 38ಡಿ ನಲ್ಲಿ ಮೂಲೆ ನಿವೇಶನಗಳ ಹೊರತುಪಡಿಸಿ ಕಟ್ಟಡ ಹೊಂದಿರುವ ಭೂಮಿಯ ಸಕ್ರಮಕ್ಕಾಗಿ ಮಾರ್ಗಸೂಚಿ ಮೌಲ್ಯ ಆಧಾರಿತ ಶುಲ್ಕ ನಿಗದಿಪಡಿಸಲಾಗಿದ್ದು, ಶೇಕಡ 50ರಷ್ಟು ಇಳಿಕೆ ಮಾಡಲಾಗಿದೆ.
ಪ್ರಾಧಿಕಾರದ ಭೂಮಿಗಳಲ್ಲಿರುವ ಅನಧಿಕೃತ ಅನುಭೋಗದಾರರು ಬಿಡಿಎ ಅಧಿನಿಯಮ 2026ರ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳ ಒಳಗೆ ಈ ಪ್ರಕರಣದ ಅಡಿಯಲ್ಲಿ ನಿವೇಶನ ಹಂಚಿಕೆ ಪಡೆಯಬೇಕು. ಇಲ್ಲದಿದ್ದಲ್ಲಿ ಅಂತಹ ಅನಧಿಕೃತ ಅನುಭೋಗದಾರರನ್ನು ಹೊರಹಾಕಲಾಗುವುದು. ನಿಯಮ ಕೇವಲ ಖಾಲಿ ನಿವೇಶನಗಳಿಗೆ ಅನ್ವಯವಾಗುವುದಿಲ್ಲ. ಆ ಜಾಗದಲ್ಲಿ ಕಾಂಕ್ರೀಟ್ ಮನೆ ಅಥವಾ ಕಟ್ಟಡ ನಿರ್ಮಾಣವಾಗಿರಬೇಕು. ಕಾಯ್ದೆ ಜಾರಿಗೆ ಬರುವ ಮೊದಲು ಕನಿಷ್ಠ 12 ವರ್ಷ ಆ ಜಾಗದಲ್ಲಿ ಮನೆಯ ಅಥವಾ ಕಟ್ಟಡ ಕಟ್ಟಿ ವಾಸವಿರಬೇಕು ಅಥವಾ ಸ್ವಾಧೀನ ಹೊಂದಿರಬೇಕು. ಒಬ್ಬ ವ್ಯಕ್ತಿಗೆ ಗರಿಷ್ಠ 4000 ಚ.ಅ.ಯುವರೆಗಿನ ಜಾಗವನ್ನು ಮಾತ್ರ ಈ ನಿಯಮದಲ್ಲಿ ಸಕ್ರಮ ಮಾಡಿ ಕೊಡಲಾಗುತ್ತದೆ. ಈ ಹಿಂದೆ ನಿಗದಿಯಾಗಿದ್ದ ಶುಲ್ಕದ ಮೊತ್ತಕ್ಕೆ ಶೇಕಡ 50ರಷ್ಟು ಕಡಿತಗೊಳಿಸುವ ಕಾನೂನು ಜಾರಿ ಮಾಡಲಾಗಿದೆ.
ಪಿಎಂ ಕಿಸಾನ್ ಯೋಜನೆಗೆ ರೈತರ ಇ-ಕೆವೈಸಿ ಕಡ್ಡಾಯ
ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ. 2,000 ರಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು ರೂ 6,000 ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಯೋಜನೆಯಡಿ ಸಹಾಯಧನ ಪಡೆಯಲು ಇನ್ನು ಮುಂದೆ ರೈತರು ಪ್ರತಿ ವರ್ಷವೂ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಇ-ಕೆವೈಸಿ ಪೂರ್ಣಗೊಳಿಸಲು ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಹಾಗೂ ಮುಖ ಗುರುತಿಸುವಿಕೆ ಆಧಾರಿತ ಇ-ಕೆವೈಸಿ ಎಂಬ ಎರಡು ವಿಧಾನಗಳಿವೆ. ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಲು ರೈತರು ಹತ್ತಿರದ ಗ್ರಾಹಕ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ತೆರಳಿ ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆಯ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ.
ಮುಖ ಗುರುತಿಸುವಿಕೆ ಆಧಾರಿತ ಇ-ಕೆವೈಸಿಯನ್ನು ರೈತರು ಸ್ವತಃ ತಮ್ಮ ಮೊಬೈಲ್‌ನಲ್ಲಿ ಪಿಎಂ ಕಿಸಾನ್ ಆಪ್ ಡೌನ್‌ಲೋಡ್ ಮಾಡಿಕೊಂಡು ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಕೃಷಿ ಇಲಾಖೆಯ ವಿಎನ್ಒ (Village Nodal Officer) ಮೊಬೈಲ್ ಆಪ್ ಮೂಲಕವೂ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 26,788 ರೈತರು ಇ-ಕೆವೈಸಿ ಮಾಡಿಸಲು ಬಾಕಿ ಇದ್ದು, ರೈತರು ಕೂಡಲೇ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಸೀತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26711594 ಅಥವಾ ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

