ಬೆಂಗಳೂರು: ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಕಾಲಮಿತಿಯೊಳಗೆ ಸೇವೆ ಮತ್ತು ಪರಿಹಾರ ಒದಗಿಸುವ ಉದ್ದೇಶದಿಂದ ನಡೆದ ‘ಪ್ರಜಾ ಸೇವಾ ಆಂದೋಲನ’ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಪ್ರತಿಯೊಂದು ಅರ್ಜಿ ಹಾಗೂ ಅಹವಾಲುಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡುವಂತೆ ಸರ್ಕಾರ ಸೂಚಿಸಿದೆ. ಅರ್ಜಿಗಳನ್ನು 30 ದಿನಗಳ ಕಾಲಮಿತಿಯೊಳಗೆ ಪರಿಹರಿಸುವಂತೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಸೆಪ್ಟೆಂಬರ್ 5ರಂದು ರಾಜ್ಯಾದ್ಯಂತ ನಡೆದ ಪ್ರಜಾ ಸೇವಾ ಆಂದೋಲನದಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾದ ಪ್ರತಿಯೊಂದು ಅರ್ಜಿ ಹಾಗೂ ಅಹವಾಲನ್ನು ಗುಣಾತ್ಮಕವಾಗಿ ಪರಿಶೀಲಿಸಿ, ನಾಗರಿಕರಿಗೆ ತೃಪ್ತಿಯಾಗುವ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅರ್ಜಿಗಳ ವಿಲೇವಾರಿ ಪ್ರಗತಿಯನ್ನು ಐಪಿಜಿಆರ್‌ಎಸ್ (IPGRS) ಪೋರ್ಟಲ್‌ನಲ್ಲಿ ನಿರಂತರವಾಗಿ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ.
ಅಧಿಕಾರ ವ್ಯಾಪ್ತಿಗೆ ಮೀರಿದ ಅರ್ಜಿಗಳಿಗೂ ಕ್ರಮ
ಅರ್ಜಿಯಲ್ಲಿನ ವಿಷಯವು ಸಂಬಂಧಪಟ್ಟ ಅಧಿಕಾರಿಯ ಅಧಿಕಾರ ವ್ಯಾಪ್ತಿಗೆ ಮೀರಿದ್ದರೆ ಅಥವಾ ಇತರೆ ಇಲಾಖೆಯ ಅನುಮತಿ ಹಾಗೂ ಕ್ರಮದ ಅಗತ್ಯವಿದ್ದರೆ, ಅಂತಹ ಅರ್ಜಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮುಖ್ಯ ಕಾರ್ಯದರ್ಶಿಯವರ ಮೂಲಕ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಹರಿಸಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ, ಸಕಾಲ ಅಧಿನಿಯಮದ ವ್ಯಾಪ್ತಿಗೆ ಬಾರದ ವಿಷಯಗಳನ್ನು ಸಕಾಲ ವ್ಯವಸ್ಥೆಯಲ್ಲಿ ಪ್ರಸ್ತಾಪಿಸುವಂತೆ ತಿಳಿಸಲಾಗಿದೆ. ಅಗತ್ಯವಿರುವ ವಿಷಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಶಾಸಕರ ಗಮನಕ್ಕೂ ತರಬೇಕು ಎಂದು ನಿರ್ದೇಶಿಸಲಾಗಿದೆ.
ಅನಗತ್ಯ ವಿಳಂಬಕ್ಕೆ ಅವಕಾಶವಿಲ್ಲ
ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಹೀಗಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಅರ್ಜಿಗಳ ವಿಲೇವಾರಿಯಲ್ಲಿ ಯಾವುದೇ ಅನಗತ್ಯ ವಿಳಂಬ ಮಾಡಬಾರದು. ಪ್ರತಿಯೊಂದು ಅರ್ಜಿಯನ್ನೂ ಆದ್ಯತೆಯಿಂದ ಪರಿಗಣಿಸಿ, 30 ದಿನಗಳೊಳಗೆ ಪರಿಹಾರ ಒದಗಿಸುವಂತೆ ಅಧೀನ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಡಾ. ಶಾಲಿನಿ ರಜನೀಶ್ ಅವರು ತಿಳಿಸಿದ್ದಾರೆ.
ಪ್ರಜಾ ಸೇವಾ ಆಂದೋಲನದಲ್ಲಿ ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿಗೆ 30 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದ್ದು, ಪ್ರಗತಿಯನ್ನು ಆನ್‌ಲೈನ್‌ನಲ್ಲಿ ನಿರಂತರವಾಗಿ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅಧಿಕೃತ ಆದೇಶದ ಪ್ರತಿ ವೀಕ್ಷಿಸಬಹುದು
ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ ; ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
2026-27ನೇ ಸಾಲಿನ ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅನುಷ್ಟಾನಗೊಂಡಿರುವ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಪಂಚವೃತ್ತಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ- ಹೊಸತು ಮತ್ತು ನವೀಕರಣ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆ, ಹೊಲಿಗೆ ಯಂತ್ರ- ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2024-25 ಮತ್ತು 2025-26 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವ ಫಲಾಪೇಕ್ಷಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ವಿಶ್ವಕರ್ಮ ಸಮುದಾಯ ಅರ್ಜಿದಾರರು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಹುಬ್ಬಳ್ಳಿ-ಧಾರವಾಡ-ಒನ್ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಸೆಪ್ಟೆಂಬರ್ 30, 2026 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು. ನಿಗಮದ ವೆಬ್‍ಸೈಟ್ https://kvcdcl.karnataka.gov.in ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಛೇರಿ ಸಹಾಯವಾಣಿ ಸಂಖ್ಯೆ:0836-2957829 ಸಂಪರ್ಕಿಸಬಹುದು ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

