ಬೆಂಗಳೂರು: ವಿಬಿ ಜಿ ರಾಮ್ ಜಿ ಯೋಜನೆ ಅಡಿ ರಾಜ್ಯದ ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಮೂಲಕ ರಾಜ್ಯದ ಶಿಫಾರಸಿಗೆ ಕೇಂದ್ರ ಸರ್ಕಾರ ಮನ್ನಣೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಶನಿವಾರದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಬಡವರಿಗೆ ಸಮರ್ಪಿತವಾದ ಬಸವ ವಸತಿ ಯೋಜನೆ, ಅಲೆಮಾರಿ ಮತ್ತು ಅಲೆಮಾರಿ ಕುಟುಂಬಗಳಿಗೆ ಮನೆ ನಿರ್ಮಿಸಲು ನೆರವಾಗುವ ದೇವರಾಜ ಅರಸು ವಸತಿ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗ್ರಾಮೀಣ ಜನರಿಗೆ ವಸತಿ ಕಲ್ಪಿಸುವ ಡಾ.ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ ಅಡಿ ಮನೆ ನಿರ್ಮಿಸಲು ಈಗ ಬಿಬಿ ಜಿ ರಾಮ್ ಜಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ವಿಬಿ ಜಿ ರಾಮ್ ಜಿ ಯೋಜನೆ ಅಡಿ ಮನೆ ನಿರ್ಮಾಣಕ್ಕೆ ಕೇಂದ್ರದಿಂದ ಅವಕಾಶ ಕಲ್ಪಿಸಿದ್ದು, ರಾಜ್ಯದ ಶಿಫಾರಸಿಗೆ ಮನ್ನಣೆ ನೀಡಲಾಗಿದೆ. ವಿವಿಧ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಯಡಿ ಅನುಮೋದಿಸಿದ್ದ 318 ಕಾಮಗಾರಿಗಳ ಸಂಖ್ಯೆಯನ್ನು 375ಕ್ಕೆ ಹೆಚ್ಚಳ ಮಾಡಲಾಗಿದೆ. ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ರಾಜ್ಯ ವಸತಿ ಯೋಜನೆ ,ಸಮುದಾಯ ಕುಶಲಕರ್ಮಿಗಳ ಕೇಂದ್ರ ನಿರ್ಮಾಣ, ವೈಯಕ್ತಿಕ ಕಾಮಗಾರಿ ಅಡಿ ರೇಷ್ಮೆ ಹುಳು ಸಾಕಾಣೆ ಘಟಕ, ಒಂದೇ ಭೂಮಿಯಲ್ಲಿ ಮರಗಳು ಹುಲ್ಲುಗಾವಲು ಮೇವು ಮತ್ತು ಜಾನುವಾರು ಸಂಯೋಜಿಸಿ ಬೆಳೆಸುವ ಯೋಜನೆಗೂ ಅವಕಾಶ ನೀಡಿದೆ ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಗ್ರಾಮೀಣ ಜನರಿಗೆ ಈ ಕುರಿತಾಗಿ ಸ್ಪಷ್ಟ ಮಾಹಿತಿ ನೀಡಿ ಗ್ರಾಮೀಣ ಉದ್ಯೋಗ ಖಾತ್ರಿ ಅಡಿ ಹೆಚ್ಚಿನ ಮಾನವ ದಿನ ಸೃಜಿಸುವಂತೆ ಮತ್ತು ಗ್ರಾಮೀಣ ಬಡ ಜನರು ಉದ್ಯೋಗವಿಲ್ಲದೆ ವಲಸೆ ಹೋಗದಂತೆ ಕ್ರಮ ಕೈಗೊಳ್ಳಲು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗ್ರಾಮ ಠಾಣಾ ಆಸ್ತಿಗೆ ಇ- ಸ್ವತ್ತು ನಿಯಮ ತಿದ್ದುಪಡಿ ಮಾಡಿ ಅಕ್ಟೋಬರ್ 2 ರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಿ ನವೆಂಬರ್ ನಲ್ಲಿ 10 ಲಕ್ಷ ಗ್ರಾಮ ಠಾಣಾ ಆಸ್ತಿಗಳಿಗೆ ನಿಯಮಾನುಸಾರ ಇ- ಸ್ವತ್ತು ನೀಡಲು ಮತ್ತು ಅಭಿಯಾನ ನಡೆಸಲು ಅನುಕೂಲವಾಗುವಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಯ(ತೆರಿಗೆ ಮತ್ತು ಶುಲ್ಕಗಳು) ನಿಯಮ 2025ಕ್ಕೆ ಅಗತ್ಯ ಮತ್ತು ಸೂಕ್ತ ತಿದ್ದುಪಡಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಅಟೆಂಡರ್ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು: ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562123 ಇಲ್ಲಿ ಅಟೆಂಡರ್ ಹುದ್ದೆಯ ಒಂದು ಖಾಲಿ ಇದ್ದು, 22 ರಿಂದ 30 ವಯೋಮಾನದ ಯುವಕ/ಯುವತಿಯರು ಅರ್ಜಿಯನ್ನು ಸಲ್ಲಿಸಬಹುದು.
ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿರುವ ಅರ್ಹ ಯುವಕ/ಯುವತಿಯರು ಕನ್ನಡ ಭಾಷೆಯಲ್ಲಿ ಪರಿಣಿತಿಯನ್ನು ಹೊಂದಿರಬೇಕು.
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟವನ್ನು ಇ-ಮೇಲ್: [email protected] ಮುಖಾಂತರ ಮಾತ್ರ ಸೆಪ್ಟೆಂಬರ್ 30 ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9113880324 ಇಲ್ಲಿ ಸಂಪರ್ಕಿಸಬಹುದು ಎಂದು ರುಡ್ ಸೆಟ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

