HomeKarnatakaಮಹಿಳೆಯರಿಗೆ ಗುಡ್ ನ್ಯೂಸ್: ಮಹಿಳಾ ಸಂಘಗಳಿಗೆ ಸಾಲ ಸೌಲಭ್ಯಕ್ಕೆ ಪ್ರತ್ಯೇಕ ಕೋ ಆಪರೇಟಿವ್ ಸೊಸೈಟಿ ಸ್ಥಾಪನೆ

ಮಹಿಳೆಯರಿಗೆ ಗುಡ್ ನ್ಯೂಸ್: ಮಹಿಳಾ ಸಂಘಗಳಿಗೆ ಸಾಲ ಸೌಲಭ್ಯಕ್ಕೆ ಪ್ರತ್ಯೇಕ ಕೋ ಆಪರೇಟಿವ್ ಸೊಸೈಟಿ ಸ್ಥಾಪನೆ

ಬೆಂಗಳೂರು: ಸ್ವಸಹಾಯ ಸಂಘಗಳ ನೆರವಿಗಾಗಿ ಶೀಘ್ರದಲ್ಲೇ ‘ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’ ಸ್ಥಾಪನೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ) ಇವರ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ರಾಷ್ಟ್ರಮಟ್ಟದ ‘ನಮ್ಮ ಸರಸ್ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಸಹಾಯ ಸಂಘಗಳ ಮಹಿಳೆಯರು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹೆಚ್ಚಿನ ಬಡ್ಡಿ ದಂಧೆಯ ಸುಳಿಗೆ ಸಿಲುಕುವುದನ್ನು ತಪ್ಪಿಸಲು ಸರ್ಕಾರವೇ ಕನಿಷ್ಠ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಪ್ರತ್ಯೇಕ ‘ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’ ಯನ್ನು ಆರಂಭಿಸಲಿದೆ ಎಂದು ಸಚಿವರು ತಿಳಿಸಿದರು. ತನ್ಮೂಲಕ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ಸುಲಭ ಸಾಲ ಒದಗಿಸಿ, ಆರ್ಥಿಕ ಸ್ವಾವಲಂಬನೆಗೆ ಬಲ ತುಂಬಲಾಗುವುದು ಎಂದು ವಿವರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆಯಿಂದ ಮಾತ್ರ ಸಮಾಜದಲ್ಲಿ ನೈಜ ಬದಲಾವಣೆ ತರಲು ಸಾಧ್ಯ.ದೇಶಾದ್ಯಂತ ಇರುವ ಸ್ವಸಹಾಯ ಸಂಘಗಳು ತಯಾರಿಸುವ ವೈವಿಧ್ಯಮಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಸಂಘದ ಸದಸ್ಯರಿಗೆ ಯಾವುದೇ ಶುಲ್ಕವಿಲ್ಲದೆ ಉಚಿತ ಮಳಿಗೆಗಳು, ಊಟ ಹಾಗೂ ವಸತಿ ಸೌಲಭ್ಯಗಳನ್ನು ಒದಗಿಸಿ, ಅವರು ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕಳೆದ ಬಾರಿ ಮಂಗಳೂರಿನಲ್ಲಿ ರಾಜ್ಯಮಟ್ಟದ ಮೇಳವನ್ನು ನಡೆಸಲಾಗಿತ್ತು.  ಈ ವರ್ಷ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಮೇಳಕ್ಕೆ ಇಂದು ಚಾಲನೆ ನೀಡಲಾಗಿದ್ದು.  ಅತೀ ಶೀಘ್ರದಲ್ಲಿ ಮೈಸೂರು ಸೇರಿದಂತೆ ಎರಡು ಸ್ಥಳಗಳಲ್ಲಿ ರಾಜ್ಯಮಟ್ಟದ ‘ಸರಸ್ ಮೇಳ’ ಗಳನ್ನು ಆಯೋಜಿಸಲಾಗುವುದು ಎಂದರು.

 ‘ಬೆಂಗಳೂರು ಸಂತೆ’ ಆರಂಭ: ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ನಿರಂತರ ಮಾರಾಟಕ್ಕಾಗಿ ರೊಟೇಷನ್ ಮಾದರಿಯಲ್ಲಿ ಮಳಿಗೆಗಳನ್ನು ಒದಗಿಸುವ ‘ಬೆಂಗಳೂರು ಸಂತೆ’ ಎಂಬ ಕಾಯಂ ಮಾರುಕಟ್ಟೆ ವ್ಯವಸ್ಥೆಯನ್ನು ಮುಂದಿನ ಒಂದು ತಿಂಗಳಲ್ಲಿ ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆಗಳ ಸಿಂಹಪಾಲು ಮಹಿಳೆಯರಿಗೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ ಸೇರಿದಂತೆ ಪ್ರಮುಖ ಯೋಜನೆಗಳ ಸಿಂಹಪಾಲು ಮಹಿಳೆಯರಿಗೆ ಮೀಸಲಾಗಿದೆ. ಮಹಿಳೆಯರ ಕೈಗೆ ಹಣ ತಲುಪಿದರೆ ಅದು ಕುಟುಂಬದ ಏಳಿಗೆ, ಮಕ್ಕಳ ಪೌಷ್ಟಿಕತೆ ಹಾಗೂ ಶಿಕ್ಷಣಕ್ಕೆ ಸದ್ವಿನಿಯೋಗವಾಗುತ್ತದೆ ಎಂಬುದು ಸರ್ಕಾರದ ದೃಢ ವಿಶ್ವಾಸವಾಗಿದೆ ಎಂದರು.

ಸಮಾಜದಲ್ಲಿ ಗ್ರಾಮೀಣ ಮಹಿಳೆಯರು ಸ್ವಾವಲಂಬಿಗಳಾಗಿ ಮತ್ತು ಗೌರವದಿಂದ ತಮ್ಮ ಕಾಲ ಮೇಲೆ ತಾವು ನಿಲ್ಲಲು ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸರಸ್ ಮೇಳಕ್ಕೆ ಭೇಟಿ ನೀಡಿ, ಇಲ್ಲಿನ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ನೆರವಾಗಬೇಕೆಂದು ಕರೆ ಕೊಟ್ಟರು.

ಕರ್ನಾಟಕ ಹಾಗೂ ಇತರೆ ರಾಜ್ಯಗಳ ಜಿಐ ಮಾನ್ಯತೆ ಪಡೆದ ಉತ್ಪನ್ನಗಳು ಗ್ರಾಮೀಣ ಮಹಿಳಾ ಉದ್ಯಮಿಗಳ ಕರಕುಶಲ, ಕೈಮಗ್ಗ, ಅಲಂಕಾರಿಕ ಗೃಹ ಉಪಯೋಗಿ ಉತ್ಪನ್ನಗಳನ್ನು ಒಟ್ಟು 150 ಮಳಿಗೆಗಳಲ್ಲಿ  ಪ್ರದರ್ಶನಕ್ಕೆ ಇಡಲಾಗಿದೆ ಎಂದು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಸುಬೋಧ್ ಯಾದವ್ ಮಾಹಿತಿ ನೀಡಿದ ಅವರು ವಿವಿಧ ರಾಜ್ಯಗಳ ಸಾಂಪ್ರದಾಯಿಕ ಹಾಗೂ ವಿಶಿಷ್ಟ ಆಹಾರ ಮಳಿಗೆಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿರುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಅಭಿಯಾನ ನಿರ್ದೇಶಕರಾದ ವಾಸಿರೆಡ್ಡಿ ವಿಜಯ ಜ್ಯೋತ್ಸ್ನ, ಉದ್ಯೋಗ ಹಾಗೂ ಕೈಗಾರಿಕಾ ತರಬೇತಿ ಇಲಾಖೆಯ ಆಯುಕ್ತರಾದ ಶಿಲ್ಪ ಎಂ,  ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಸ್ವಸಹಾಯ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular