ರಾಜಸ್ಥಾನದ ಅಲ್ವಾರ್‌ನಲ್ಲಿ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ ಲಾಲ್‌ಚಂದ್ ಮೀನಾ ಅವರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಡ್ಯಾಂಗೆ ಕರೆದೊಯ್ದು, ವಿದ್ಯಾರ್ಥಿನಿಯರೊಂದಿಗೆ ನೀರಿಗೆ ಇಳಿದಿರುವ ವಿಡಿಯೋ ವೈರಲ್ ಆಗಿದೆ. ಸುರಕ್ಷತಾ ನಿಯಮ ಉಲ್ಲಂಘನೆ ಹಾಗೂ ಅನುಚಿತ ವರ್ತನೆ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅವರನ್ನು ಅಮಾನತುಗೊಳಿಸಿ, ಪ್ರಕರಣದ ಕುರಿತು ಇಲಾಖಾ ತನಿಖೆಗೆ ಆದೇಶಿಸಿದೆ.
ಶಾಲೆಯ ಪ್ರಿನ್ಸಿಪಾಲ್ ಲಾಲ್‌ಚಂದ್ ಮೀನಾ ಅವರ ವರ್ತನೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. 11 ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರೊಂದಿಗೆ ಡ್ಯಾಂಗೆ ಇಳಿದು ಈಜುತ್ತಿದ್ದ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಪದಕ್ ಛಾಪ್ಲಿ ಪ್ರದೇಶದ ಸರ್ಕಾರಿ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಿನ್ಸಿಪಾಲ್ ಲಾಲ್‌ಚಂದ್ ಮೀನಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಬಿಕಾನೇರ್‌ನ ಪ್ರೌಢ ಶಿಕ್ಷಣ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಈ ಘಟನೆ ಆಗಸ್ಟ್ 15ರಂದು ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಮುಗಿದ ಬಳಿಕ ಪ್ರಿನ್ಸಿಪಾಲ್ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಾಲೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಭರಾಜ್ ಡ್ಯಾಂಗೆ ಕರೆದೊಯ್ದಿದ್ದರು. ವಿದ್ಯಾರ್ಥಿಗಳಿಗೆ ಈಜು ಕಲಿಸುವ ಉದ್ದೇಶದಿಂದ ಅವರನ್ನು ಅಲ್ಲಿಗೆ ಕರೆದೊಯ್ಯಲಾಗಿತ್ತು ಎಂದು ಕೆಲವು ವರದಿಗಳು ತಿಳಿಸಿವೆ.
ಆದರೆ, ವಿದ್ಯಾರ್ಥಿಗಳನ್ನು ಡ್ಯಾಂನ ನೀರಿಗೆ ಇಳಿಸುವ ವೇಳೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಡ್ಯಾಂನಲ್ಲಿ ಸುಮಾರು 11 ಅಡಿ ಆಳದ ನೀರಿದ್ದು, ಅಲ್ಲಿ ಈಜುವುದು ಅಪಾಯಕಾರಿ ಹಾಗೂ ಸ್ನಾನಕ್ಕೆ ಅನುಮತಿ ಇಲ್ಲ ಎಂದು ವರದಿಗಳು ಹೇಳಿವೆ. ವಿದ್ಯಾರ್ಥಿಗಳಿಗೆ ಲೈಫ್ ಜಾಕೆಟ್ ಸೇರಿದಂತೆ ಯಾವುದೇ ಸುರಕ್ಷತಾ ಸಾಧನಗಳನ್ನು ಒದಗಿಸಿರಲಿಲ್ಲ ಎಂಬ ಆರೋಪವೂ ಇದೆ.
ಇದೇ ವೇಳೆ, ವಿದ್ಯಾರ್ಥಿನಿಯರೊಂದಿಗೆ ಪ್ರಿನ್ಸಿಪಾಲ್ ನೀರಿಗೆ ಇಳಿದ ದೃಶ್ಯಗಳನ್ನು ಕೆಲವರು ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಆ ವಿಡಿಯೋದಲ್ಲಿ ಅವರು ವಿದ್ಯಾರ್ಥಿನಿಯರ ಸಮ್ಮುಖದಲ್ಲಿ ಬಟ್ಟೆಯಿಲ್ಲದೆ ನೀರಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರಿ ನೌಕರರ ನಿಯಮ ಉಲ್ಲಂಘನೆ ಆರೋಪ
ಪ್ರಿನ್ಸಿಪಾಲ್ ಅವರ ವರ್ತನೆಯು ಸರ್ಕಾರಿ ನೌಕರರ ನಡವಳಿಕೆ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ರಾಜಸ್ಥಾನ ಸಿವಿಲ್ ಸರ್ವಿಸಸ್ (ಕ್ಲಾಸಿಫಿಕೇಶನ್, ಕಂಟ್ರೋಲ್ ಅಂಡ್ ಅಪೀಲ್) ನಿಯಮಗಳು, 1958ರ ನಿಯಮ 13(1) ಅಡಿಯಲ್ಲಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.
ಅಮಾನತು ಅವಧಿಯಲ್ಲಿ ಲಾಲ್‌ಚಂದ್ ಮೀನಾ ಅವರ ಮುಖ್ಯ ಕಚೇರಿಯನ್ನು ಬಿಕಾನೇರ್‌ನಲ್ಲಿರುವ ಪ್ರೌಢ ಶಿಕ್ಷಣ ನಿರ್ದೇಶನಾಲಯಕ್ಕೆ ನಿಗದಿಪಡಿಸಲಾಗಿದೆ.
ಇತ್ತ ವೈರಲ್ ವಿಡಿಯೋ ಕುರಿತು ಪೊಲೀಸರು ಕೂಡ ಪರಿಶೀಲನೆ ಆರಂಭಿಸಿದ್ದಾರೆ ಎನ್ನಲಾಗಿದೆ. ವಿಡಿಯೋ ನೈಜವೇ, ವಿದ್ಯಾರ್ಥಿಗಳನ್ನು ಡ್ಯಾಂಗೆ ಕರೆದೊಯ್ದ ಸಂದರ್ಭವೇನು, ಅಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಕುರಿತು ಮೂರು ಸದಸ್ಯರ ಸಮಿತಿಯೊಂದನ್ನೂ ರಚಿಸಲಾಗಿದ್ದು, ಸಮಿತಿ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ವರದಿ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.
https://twitter.com/i/status/2091485771429765181

