ಬೆಂಗಳೂರು: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತೆ ಸ್ವಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕೆ.ಎನ್. ರಾಜಣ್ಣ ಇಂದು ಬೆಂಗಳೂರಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪೆಕ್ಸ್ ಬ್ಯಾಂಕ್‌ನಲ್ಲಿ ರೈತರ ನೆರವಿಗೆ ಸರ್ಕಾರದ ಸಹಕಾರ ಅತ್ಯಂತ ಮುಖ್ಯ. ಸರ್ಕಾರದ ಪರ ಇರುವವರು ಅಧಿಕಾರದಲ್ಲಿದ್ದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ನಾನು ಸ್ಪರ್ಧೆಯಿಂದ ಹಿಂದೆ ಸರಿದೆ. ಸ್ಪರ್ಧೆ ಮಾಡಿದ್ದರೆ ನಾನೇ ಗೆಲ್ಲುತ್ತಿದ್ದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಪರವಾಗಿಯೇ ಇದ್ದರು, ಆದರೆ ಈ ವಿಚಾರದಲ್ಲಿ ಅವರ ಮಾತು ನಡೆದಿಲ್ಲ. ರಾಜ್ಯ ನಾಯಕರಿಂದಲೋ ಅಥವಾ ಎಐಸಿಸಿ ನಾಯಕರಿಂದಲೋ ಎಲ್ಲಿ ಹಿನ್ನಡೆಯಾಯಿತೋ ಗೊತ್ತಿಲ್ಲ. ಎರಡೂವರೆ ವರ್ಷಗಳ ಬಳಿಕವೂ ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಸ್ಪರ್ಧಿಯೂ ಅಲ್ಲ ಎಂದರು.
ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ವಿಧಾನಸಭೆಗೆ ಬದಲಾಗಿ ಲೋಕಸಭೆಗೆ ಸ್ಪರ್ಧಿಸುತ್ತೇನೆ ಎಂದಾಗ ನಾಯಕರು ಸಹಮತ ವ್ಯಕ್ತಪಡಿಸಿದರು. ಹಾಗೆಯೇ 35 ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಮಹಿಳೆಯರಿಗೆ ಸ್ಥಾನ ಸಿಗದ ಬಗ್ಗೆ ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರೊಂದಿಗೆ ಚರ್ಚಿಸುವಂತೆ ತಿಳಿಸಿದ್ದೇನೆ ಎಂದರು.
ಸರ್ಕಾರದ ನೂರು ದಿನಗಳ ಸಂಭ್ರಮಾಚರಣೆಗೆ ಬಿ.ಕೆ. ಹರಿಪ್ರಸಾದ್ ಅವರಿಗೆ ಆಹ್ವಾನ ನೀಡಬೇಕಿತ್ತು. ಡಿ.ಕೆ. ಶಿವಕುಮಾರ್ ಅಧ್ಯಕ್ಷರಾಗಿದ್ದರೆ ಬಿಡುತ್ತಿದ್ದರಾ? ಸಿದ್ದರಾಮಯ್ಯ ಅವರೇ ಕರೆದು ಮಾತನಾಡಬೇಕಿತ್ತು. ಇಲ್ಲಿನ ಬೆಳವಣಿಗೆಗಳನ್ನು ಎಐಸಿಸಿಗೆ ತಿಳಿಸಬೇಕಾಗುತ್ತದೆ, ಕಾಲಕ್ರಮೇಣ ಎಲ್ಲವೂ ಸರಿಹೋಗಲಿದೆ ಎಂದು ಹೇಳಿದರು.
ಅಧಿಕಾರ ಅನ್ನೋದು ವಿಷವಿದ್ದಂತೆ, ಗಿಡದ ಸುತ್ತ ಕಳೆ ಬೆಳೆದಂತೆ. ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿಗೆ ಕಾಂಗ್ರೆಸ್ ನವರೇ ನೀಡಿದ ದೂರು ಕಾರಣ. ಮುಡಾ ವಿಚಾರದಲ್ಲಿ ದೂರು ಕೊಟ್ಟಿದ್ದು ಕಾಂಗ್ರೆಸ್‌ನವರೇ ಅಲ್ಲವೇ? ಕೃಷ್ಣ ಎಂಬಾತ ಸುಪ್ರೀಂ ಕೋರ್ಟ್‌ವರೆಗೆ ತಾನಾಗಿಯೇ ಹೋದನೇ? ನಮ್ಮವರೇ ಪ್ರಬಲರ ಬೆಂಬಲವಿಲ್ಲದೆ ಹೋಗಲು ಸಾಧ್ಯವೇ? ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಪರೋಕ್ಷವಾಗಿ ಆರೋಪ ಮಾಡಿದರು.
ಯಾವಾಗ ಬೇಕಾದರೂ ನಮ್ಮ ಮನೆ ಮೇಲೆ ಇಡಿ, ಐಟಿಯವರು ದಾಳಿ ನಡೆಸಲಿ: ಸಚಿವ ವಿಜಯಾನಂದ ಕಾಶಪ್ಪನವರ್ ಹೇಳಿಕೆ
ಬಾಗಲಕೋಟೆ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಬಿಜೆಪಿಯ ಕುತಂತ್ರದಿಂದ ನಡೆದಿರುವ ದಾಳಿ ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ್, ಬಿಜೆಪಿಗೆ ಸೇರದಿದ್ದರೆ ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಬಿಜೆಪಿಗೆ ಸೇರದಿದ್ದರೆ ಈ ರೀತಿ ದಾಳಿ ನಡೆಯುತ್ತವೆ ಎಂದು ಆರೋಪಿಸಿದರು.
ಈ ಹಿಂದೆ ಕಾಂಗ್ರೆಸ್ನ 56 ಶಾಸಕರ ಪಟ್ಟಿ ಮಾಡಿದ್ದರು. ಆನೇಕ ಜನ ನಮ್ಮ ಹೆಸರನ್ನೂ ಕೊಟ್ಟಿದ್ದರು, ಆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಬಿಜೆಪಿಗೆ ಸೇರ್ಪಡೆಯಾಗದಿದ್ದರೆ ನಿಮ್ಮ ಮೇಲೆ ದಾಳಿ ಮಾಡ್ತೇವೆ ಅಂತಾರೆ. ಆದರೆ ನಾನು ಇಡಿ, ಐಟಿ ದಾಳಿ ಸೇರಿದಂತೆ ಎಲ್ಲವನ್ನೂ ಎದುರಿಸಲು ಸಿದ್ಧನಿದ್ದೇನೆ ಎಂದರು.
ಯಾವಾಗ ಬೇಕಾದ್ರೂ ನಮ್ಮ ಮನೆಗೆ ಇಡಿ, ಐಟಿಯವರು ಬರಬಹುದು. ನಾನು ಎದುರಿಸಲು ಸಿದ್ಧ. ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ಬಿಜೆಪಿಯವರ ಕುತಂತ್ರ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಹಿಂದೆ ಕಾಂಗ್ರೆಸ್ನವರದ್ದೇ ಕೈವಾಡವಿದೆ. ಮುಡಾ ವಿವಾದದ ಹಿಂದೆಯೂ ಕಾಂಗ್ರೆಸ್‌ನವರೇ ಇದ್ರು ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ರಾಅಜಣ್ಣ ಅವರ ಮಾತುಗಳನ್ನು ನಾನು ಗಮನಿಸಿಲ್ಲ. ಇಂತಹ ಆರೋಪಗಳು ಕೇಳಿ ಬರುತ್ತಿವೆ, ಆದರೆ ಕಾಂಗ್ರೆಸ್ನವರ ಕೈವಾಡವಿಲ್ಲ. ವಿನಾಕಾರಣ ಆರೋಪ ಮಾಡುತ್ತಾರೆ, ಅವೆಲ್ಲ ಸರಿಯಿಲ್ಲ, ಒಪ್ಪುವಂತಹದ್ದಲ್ಲ. ನಮ್ಮ ನಾಯಕರ ಬೆಳವಣಿಗೆ ಸಹಿಸದೆ ಬಿಜೆಪಿಯವರು ಕುತಂತ್ರ ಮಾಡ್ತಿದ್ದಾರೆ. ಕಾಂಗ್ರೆಸ್ನವರ ಮೇಲೆ ಮಾತ್ರ ಜಾರಿ ನಿರ್ದೇಶನಾಲಯ ದಾಳಿ ಮಾಡುತ್ತಿದೆ ಎಂದರು.
ಇಡೀ ದೇಶದಲ್ಲಿ ಬಿಜೆಪಿಯ ಒಬ್ಬ ನಾಯಕನ ಮೇಲೂ ಇಡಿ ದಾಳಿ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ನವರ ಮೇಲೆ ದ್ವೇಷ, ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಹಗರಣಗಳು ಆಗಿಲ್ಲ? ಅವೆಲ್ಲವನ್ನು ಮುಚ್ಚಿ ಹಾಕಿದ್ದಾರೆ. ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಮನೆ ಮೇಲೆ ಇಡಿ ದಾಳಿ ಮಾಡಲಿ ಎಂದರು.

