ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ಕೆಲವರ ಟೀಕೆ ಹಾಗೂ ಮಾಜಿ ಸಿಎಂ ಸ್ಟಾಲಿನ್ ಭೇಟಿಯಾಗಿದ್ದ ವಿಚಾರವಾಗಿ ಸ್ವತಃ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ನಟ ವಿಜಯ್ ಮುಖ್ಯಮಂತ್ರಿಯಾಗಿದ್ದಕ್ಕೆ ತನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಚೆನ್ನೈನ ಪೋಯಸ್ ಗಾರ್ಡನ್ ನಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಟ ರಜನಿಕಾಂತ್, ಚುನಾವಣೆಯ ನಂತರ ನನ್ನ ವಿರುದ್ಧ ಅನೇಕ ಟೀಕೆಗಳು ಬರುತ್ತಿವೆ. ನಾನು ಅವುಗಳಿಗೆ ಪ್ರತಿಕ್ರಿಯಿಸದಿದ್ದರೆ, ಅವು ಸತ್ಯವೆಂದಾಗುತ್ತದೆ. ಹಾಗಾಗಿ ನಾನು ಸ್ಪಷ್ಟ ಪಡಿಸಬೇಕಿದೆ ಎಂದರು. ಹೊಸ ಪಕ್ಷವನ್ನು ಸ್ಥಾಪಿಸಿ, ಪ್ರಬಲ ಮೈತ್ರಿಕೂಟ ಸೋಲಿಸಿ ವಿಜಯ್ ಸಿಎಂ ಆಗಿದ್ದಾರೆ. ವಿಜಯ್ ಸಿಎಂ ಆಗಿದ್ದು ನನಗೆ ಅಸೂಯೆಯಿಲ್ಲ, ಸಂತೋಷ ತಂದಿದೆ ಎಂದು ಹೇಳಿದರು.
ನಾನು ರಾಜಕೀಯ ಪ್ರವೇಶಿಸಿದ್ದರೆ 100% ಯಶಸ್ವಿಯಾಗುತ್ತಿದ್ದೆ. ಆದರೆ ನಾನು ರಾಜಕೀಯದಿಂದ ದೂರ ಸರಿದು ಹಲವು ದಿನಗಳಾಗಿವೆ. ವಿಜಯ್ ಸಿಎಂ ಆಗಿದ್ದಕ್ಕೆ ನನಗೆ ಯಾವ ಅಸೂಯೆಯಿಲ್ಲ. ವಿಜಯ್ ಹಾಗೂ ನನ್ನ ನಡುವೆ ಒಂದು ಪೀಳಿಗೆಯ ಅಂತರವಿದೆ. ವಿಜಯ್ ಹಾಗೂ ನನ್ನ ನಡುವೆ 25 ವರ್ಷ ಅಂತರವಿದೆ. ವಿಜಯ್ ಸಿಎಂ ಆಗಿ ಗೆದ್ದ ತಕ್ಷಣ ನಾನು ಅವರಿಗೆ ಕರೆ ಮಾಡಿ ಅಭಿನಂದಿಸಿದ್ದೇನೆ ಎಂದು ತಿಳಿಸಿದರು.
ವಿಜಯ್ ಪ್ರಮುಖ ಪಕ್ಷಗಳನ್ನು ಸೋಲಿಸಿ ಸ್ವತಂತ್ರವಾಗಿ ಮನ್ನಣೆ ಪಡೆದಿದ್ದಾರೆ. ಇದು ನನಗೆ ಆಶ್ಚರ್ಯ ಹಾಗೂ ಸಂತೋಷ ಎರಡನ್ನೂ ಉಂಟುಮಾಡಿದೆ. ವಿಜಯ್ ಎಂಜಿಆರ್ ಹಾಗೂ ಎನ್ ಟಿಆರ್ ಸಾಧಿಸಿದ್ದಕ್ಕಿಂತಲೂ ದೊಡ್ಡದನ್ನು ಸಾಧಿಸಿದ್ದಾರೆ. ಅವರು ತಮಿಳುನಾಡಿನ ಅಭಿವೃದ್ಧಿಗಾಗಿ ಉತ್ತಮ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.
ಇದೇ ವೇಳೆ ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಭೇಟಿಯಾಗಿರುವ ವಿಚಾರವಾಗಿ ಹಾಗೂ ತಮ್ಮ ವಿರುದ್ಧದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ನಾನು ಹೋಗಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾದೆ. ಸ್ಟಾಲಿನ್ ಹಾಗೂ ನನ್ನ ಸ್ನೇಹ ರಾಜಕೀಯವನ್ನೂ ಮೀರಿಸಿದ್ದು. ಅವರು ಕೊಳತ್ತೂರಿನಲ್ಲಿ ಸೋತಿದ್ದು ನನ್ನಗೆ ಬೇಸರವಾಯಿತು. ಹಾಗಾಗಿ ಅವರನ್ನು ಭೇಟಿಯಾಗಿ ಸಮಾಧಾನ ಮಾಡಿದೆ ಎಂದರು.
ಸ್ಟಾಲಿನ್ ಹಾಗೂ ನನ್ನ ನಡುವಿನ ಸ್ನೇಹ 35-40 ವರ್ಷಗಳದ್ದು, ಹಾಗಾಗಿ ಸೋತಾಗ ಅವರನ್ನು ಭೇಟಿಯಾಗಿ ಸಮಾಧಾನ ಮಾಡಿ ಧೈರ್ಯ ತುಂಬಿದ್ದೇನೆ. ರಜನಿ ಅನಗತ್ಯವಾಗಿ ಮಾತನಾಡುವ ಕೀಳುಮಟ್ಟದ ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಿದರು.

