ಬೆಂಗಳೂರು : ರಾಜ್ಯದ ಅತ್ಯಂತ ದೊಡ್ಡ ಕಾರಾಗೃಹವಾದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ಮತ್ತು ಜೈಲು ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೈದಿಗಳು ತಂಗಿರುವ ಬ್ಯಾರಕ್’ಗಳ ಮೇಲೆ ನಡೆಸಿದ ಈ ಶೋಧ ಕಾರ್ಯದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.
ಕೈದಿಗಳ ಬ್ಯಾರಕ್’ನಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಮೊಬೈಲ್ ಫೋನ್ಗಳು, ಸಿಮ್ ಕಾರ್ಡ್ಗಳು, ಚಾರ್ಜರ್ ಗಳು ಮತ್ತು ಇಯರ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೈಲಿನ ಒಳಗಿನಿಂದಲೇ ಕೈದಿಗಳು ನೆಟ್ವರ್ಕ್ ಹೊಂದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಪ್ರತಿಯೊಂದು ಬ್ಯಾರಕ್, ಹಾಸಿಗೆ ಹಾಗೂ ಶೌಚಾಲಯದ ಮೂಲೆ ಮೂಲೆಗಳನ್ನೂ ತಪಾಸಣೆ ಮಾಡಲಾಗಿದೆ.
3 ತಿಂಗಳಲ್ಲಿ 250+ ಮೊಬೈಲ್: ಕಳೆದ ಮೂರು ತಿಂಗಳಿನಿಂದ ನಡೆಸಿದ ನಿರಂತರ ಕಾರ್ಯಾಚರಣೆಯಲ್ಲಿ ಇದುವರೆಗೆ ಬರೊಬ್ಬರಿ 250ಕ್ಕೂ ಹೆಚ್ಚು ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿರುವುದು ಜೈಲಿನ ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ.ಇಷ್ಟು ದೊಡ್ಡ ಮಟ್ಟದಲ್ಲಿ ಮೊಬೈಲ್ ಮತ್ತು ಸಿಮ್ ಕಾರ್ಡ್ಗಳು ಜೈಲಿನ ಒಳಗೆ ಹೇಗೆ ಬಂದವು? ಇದಕ್ಕೆ ಜೈಲು ಸಿಬ್ಬಂದಿಗಳ ಸಹಕಾರವೇನಾದರೂ ಇದೆಯೇ? ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

