ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ಶೀಘ್ರವೇ ಸಿಹಿಸುದ್ದಿ ಸಿಗಲಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಿ.ರಂದೀಪ್ ಮತ್ತು ಆಯುಕ್ತೆ ಅರುಂಧತಿ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ವಿವಿಧ ವಿಚಾರದ ಕುರಿತು ಮಾತುಕತೆ ನಡೆಸಿದ್ದಾರೆ.
ಈ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ನೌಕರ ಸಂಘ ಹಾಗೂ ಎಲ್ಲಾ ವೃಂದ ಸಂಘಗಳ ಬೇಡಿಕೆಗಳ ವರದಿಯ ಮಾಹಿತಿಯ ಬಗ್ಗೆ ಹಾಗೂ ವಿವಿಧ ವೃಂದಗಳ 45ಕ್ಕೂ ಹೆಚ್ಚು ಸೇವೆ ಮತ್ತು ಆಡಳಿತಾತ್ಮಕ ವಿಷಯಗಳ ಕುರಿತು ಕೂಲಂಕುಷವಾಗಿ ಚರ್ಚೆ ನಡೆಸಲಾಗಿದೆ.
ಯಾವ-ಯಾವ ವಿಚಾರಗಳು
* ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವುದರಿಂದ ಇಲಾಖೆ ವತಿಯಿಂದ ಸೀನಿಯರ್ ಕೌನ್ಸಿಲ್ ಅವರನ್ನು ನೇಮಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲು ಕೂಡಲೇ ಕ್ರಮವಹಿಸುವುದು.
* ಇಲಾಖೆಯ ನೌಕರರ ಮೇಲೆ ಬಾಕಿ ಇರುವ ಇಲಾಖಾ ವಿಚಾರಣೆಗಳನ್ನು ಪರಿಶೀಲನೆ ನಡೆಸಿ ಪ್ರಕರಣಗಳನ್ನು ಮುಕ್ತಾಯಗೊಳಿಸುವುದು.
* ಖಾಲಿ ಇರುವಂತ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರೇಡ್ -1 ಕಾರ್ಯದರ್ಶಿ, ಗ್ರೇಡ್ -2, ಎಸ್‌ಡಿಎ ಹುದ್ದೆಗಳಿಗೆ ಕೊಡಲೇ ಬಡ್ತಿ ನೀಡುವುದು ಹಾಗೂ ಬಡ್ತಿಯ ಪ್ರಮಾಣವನ್ನು ಹೆಚ್ಚಿಸುವುದು, ಪ್ರಭಾರ ಭತ್ಯೆ ಪಾವತಿಗೆ ಸಂಬಂಧಿಸಿದ ಆದೇಶಗಳನ್ನು ಶೀಘ್ರವಾಗಿ ಮಾಡುವ ಬಗ್ಗೆ ಚರ್ಚಿಸಲಾಯಿತು.
* ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಎಲ್ಲ ಹುದ್ದೆಗಳನ್ನು ಬಿ-ಗ್ರೂಪ್‌ಗೆ ಉನ್ನತೀಕರಿಸುವುದು.
* ಜಿಬಿಎ ವ್ಯಾಪ್ತಿಗೆ ಒಳಪಡುವ ಎಲ್ಲಾ ಅಧಿಕಾರಿ ನೌಕರರನ್ನು ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ ಪಡೆದು ವಿಲೀನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದು.
* ಎಸ್‌ಡಿಎಗಳಿಗೆ ಬಡ್ತಿಯ ಅವಕಾಶ ಕಲ್ಪಿಸುವುದು, ಎಫ್‌ಡಿಎ ಹುದ್ದೆಯನ್ನು ಸೃಜಿಸುವುದು.
* ಪಿಡಿಒಗಳಿಗೆ ನೀಡಿರುವ ಶೇ 4ರ ನಿಯೋಜನೆಯಂತೆ ಕಾರ್ಯದರ್ಶಿ ಮತ್ತು ಎಸ್‌ಡಿಎಯವರಿಗೂ ಅವಕಾಶ ಕಲ್ಪಿಸುವುದು.
* ಕರ ವಸಲಿಗಾರರಿಗೆ ಒತ್ತಡ ನಿವಾರಣೆ, ಬಡ್ತಿ, ಪ್ರಯಾಣ ಭತ್ಯೆ, ತೆರಿಗೆ ವಸೂಲಾತಿಯಲ್ಲಿನ ತಾಂತ್ರಿಕ ಅಂಶಗಳ ಬಗ್ಗೆ ಚರ್ಚೆ.
* ಬಾಕಿ ಇರುವ ಉಪಕರಗಳ ಪಾವತಿಗೆ ವಸೂಲಾತಿಯಿಂದ ಒಮ್ಮೆಲೇ ವಿನಾಯಿತಿ ಹಾಗೂ ಪ್ರಸ್ತುತ ಉಪಕಾರಗಳ ಪಾವತಿಗೆ ಲೆಕ್ಕ ಪರಿಶೋಧನಾ ಇಲಾಖೆಯೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ.
* ಅಬ್ದುಲ್ ನಜೀರ್ ಸಾಬ್ ಅವರ ಜನ್ಮದಿನವನ್ನು ಪಂಚಾಯತ್ ಸಬಲೀಕರಣ ದಿನವನ್ನಾಗಿ ಆಚರಿಸಲು ಅಗತ್ಯ ಕ್ರಮಕ್ಕಾಗಿ ಪ್ರಸ್ತಾವನೆ.
* ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ನಿಗದಿತ ಸಮಯದಲ್ಲಿ ನೇಮಕಾತಿ, ಬಡ್ತಿ, ನಿವೃತ್ತಿ ಅಥವಾ ಮೃತರಾದಲ್ಲಿ ಇಡುಗಂಟು, ವಿಮೆ, ಇಎಸ್‌ಐ, ಪಿಎಫ್ ನೀಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಮನವಿ.
* ಅಧಿಕಾರಿ ನೌಕರರಿಗೆ ಮುಂಬಡ್ತಿಗೆ ತೊಂದರೆಯಾಗದಂತೆ ಎಸ್‌ಸರ್ ಮತ್ತು ಸಿಆರ್‌ಗಳ ವಿಶೇಷ ವರದಿಯನ್ನು ಸಿದ್ಧಪಡಿಸಿ ನೀಡಲು ಹಾಗೂ ಟೈಮ್ ಬಾಂಡ್ ಅನ್ನು ನೀಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಲು ಮನವಿ.
* ಇಲಾಖೆ ಅಧಿಕಾರಿ ನೌಕರರಿಗೆ ನೇಮಕಾತಿ ಸಂದರ್ಭದಲ್ಲಿ ಇನ್ ಸರ್ವಿಸ್ ಅವಕಾಶ ಕಲ್ಪಿಸುವುದು.
ಮೂರು ತಿಂಗಳಿಗೊಮ್ಮೆ ಮಾತೃ ಸಂಘ ಮತ್ತು ವೃಂದ ಸಂಘಗಳ ಸಭೆಯನ್ನು ನಡೆಸಿ ಚರ್ಚಿಸುವುದರೊಂದಿಗೆ ಮೇಲ್ಕಂಡ ವಿಷಯಗಳು ಸೇರಿದಂತೆ ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಲಾಯಿತು.
ಎಲ್ಲಾ ಮನವಿಗಳನ್ನು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದ ಡಿ.ರಂದೀಪ್ ಅವರು ಆಯುಕ್ತರಾದ ಅರುಂಧತಿ ಚಂದ್ರಶೇಖರ್ ಹಾಗೂ ನಿರ್ದೇಶಕ ನೋಮೇಶ್, ವಾಣಿ, ಉಪ ನಿರ್ದೇಶಕ ಚಂದ್ರಪ್ಪ ಅವರಿಗೆ ಸಭೆಯಲ್ಲಿನ ಎಲ್ಲಾ ಅಂಶಗಳನ್ನು ಕೂಡಲೇ ಅನುಷ್ಠಾನಗೊಳಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಿದರು.

