ಸರ್ಕಾರಿ ನೌಕರನೊಬ್ಬ 30,000 ಲಂಚ ಸ್ವೀಕಾರ ಮಾಡಿದ್ದಾನೆ ಎಂದು ಮನೆ ಮೇಲೆ ರೈಡ್ ಮಾಡಲಾಗಿದೆ. ಆದರೆ ಮನೆಯಲ್ಲಿ ಸಿಕ್ಕ ಹಣ ನೋಡಿ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ. ನೋಟು ಎಣಿಸುವ ಯಂತ್ರತಂದು ಕಂತೆ ಕಂತೆ ಹಣವನ್ನು ರಾಶಿ ಹಾಕಿಕೊಂಡು ಎಣಿಕೆ ಮಾಡುತ್ತಿದ್ದಾರೆ.
ಒಡಿಶಾದಲ್ಲಿ ನಡೆದ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯಾಚರಣೆಯ ವರದಿ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ಅಧಿಕಾರಿ ಮನೆಯಲ್ಲಿ ಸಿಕ್ಕ 4,27,113,600 ರೂ. ಹಣ ನೋಡಿ ಜನರು ಸುಸ್ತಾಗಿದ್ದಾರೆ.
ಕಟಕ್‌ನ ವೃತ್ತದ ಗಣಿಗಾರಿಕೆ ಅಧಿಕಾರಿ (Circle Mining Officer) ದೇವಬ್ರತ ಮಹಂತಿ ನಿವಾಸದ ಮೇಲೆ ನಡೆದ ದಾಳಿಯ ವೇಳೆ ಕೋಟ್ಯಾಂತರ ರೂಪಾಯಿ ಹಣ ಪತ್ತೆಯಾಗಿದೆ. ಭುವನೇಶ್ವರದಲ್ಲಿರುವ ಫ್ಲಾಟ್‌ನಿಂದ 4,27,113,600 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಪರವಾನಗಿ ಪಡೆದ ಕಲ್ಲಿದ್ದಲು ಉದ್ಯಮಿಯೊಬ್ಬರಿಂದ ತಮ್ಮ ವ್ಯವಹಾರವನ್ನು ಸುಗಮವಾಗಿ ನಡೆಸಲು 30,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಮಂಗಳವಾರ ರಾತ್ರಿ ದೇವಬ್ರತ ಮಹಂತಿ ಅವರನ್ನು ರೆಡ್-ಹ್ಯಾಂಡ್ ಆಗಿ ಹಿಡಿದಿದ್ದರು. ಬಳಿಕ ಅವರ ಮನೆ ಮೇಲೆ ದಾಳಿ ಮಾಡಲಾಗಿತ್ತು.
ಒಡಿಶಾದಲ್ಲಿನ ಈ ಪ್ರಕರಣ ಈಗ ದೇಶಾದ್ಯಂತ ಸುದ್ದಿಯಾಗಿದೆ. ಒಂದು ಸಣ್ಣ ಲಂಚದ ಮೊತ್ತದ ತನಿಖೆಯು ಹೇಗೆ ಬೃಹತ್ ಪ್ರಮಾಣದ ಅಕ್ರಮ ಆಸ್ತಿಯನ್ನು ಬಯಲಿಗೆ ತಂದಿದೆ ಎಂಬುದು ತಿಳಿದುಬಂದಿದೆ.
ಒಡಿಶಾ ವಿಜಿಲೆನ್ಸ್ ಇಲಾಖೆಯು ಇತ್ತೀಚಿನ ದಿನಗಳಲ್ಲಿ ನಡೆಸಿದ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ. ಈಗ ಈ ಅಧಿಕಾರಿಯ ವಿರುದ್ಧ ಇತರ ದೂರುಗಳು ಏನಿವೆ? ಎಂದು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಬುಧವಾರವೂ ದೇವಬ್ರತ ಮೊಹಂತಿಗೆ ಸೇರಿದ ವಿವಿಧ ಪ್ರದೇಶದಲ್ಲಿ ದಾಳಿ ಮುಂದುವರೆದಿದೆ. ಇದುವರೆಗೆ ಪತ್ತೆಯಾದ ಇತರ ಆಸ್ತಿಗಳಲ್ಲಿ ಭುವನೇಶ್ವರದಲ್ಲಿರುವ ಒಂದು ಐಷಾರಾಮಿ 2 ಅಂತಸ್ತಿನ ಮನೆ ಮತ್ತು ಸರಿಸುಮಾರು 120 ಗ್ರಾಂ ಚಿನ್ನ ಸೇರಿವೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ (Prevention of Corruption Act) ಪ್ರಕರಣ ದಾಖಲಿಸಲಾಗಿದೆ. ವಿಜಿಲೆನ್ಸ್ ಸಂಸ್ಥೆ ಈ ಹಿಂದೆ ಮಾಡಿದ್ದ ಅತಿ ದೊಡ್ಡ ನಗದು ಜಪ್ತಿ 3.4 ಕೋಟಿ ರೂಪಾಯಿ ಮೌಲ್ಯದ್ದಾಗಿತ್ತು.

