ನವದೆಹಲಿ- ಪ್ರಧಾನಿ ನರೇಂದ್ರ ಮೋದಿ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ, ತಮ್ಮ ಆರೋಪಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳನ್ನು ಅವರು ಬಹಿರಂಗಪಡಿಸಿಲ್ಲ. ಇದೇ ವೇಳೆ, ಪ್ರಧಾನಿ ಮೋದಿ ಅವರಿಗೆ ವಿದೇಶಿ ಶಕ್ತಿಗಳಿಂದ ಯಾರು ಸಹಾಯ ಪಡೆಯುತ್ತಿದ್ದಾರೆ ಎಂಬ ವಿಚಾರದ ಕುರಿತು ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ತಮ್ಮ ಫೋನ್ನಲ್ಲೇ ಕದ್ದಾಲಿಕೆಗೆ ಸಂಬಂಧಿಸಿದ ಪುರಾವೆಗಳಿವೆ ಎಂದು ಹೇಳಿದ್ದಾರೆ. “ಪುರಾವೆ ಇಲ್ಲಿದೆ, ಅದು ಈ ಫೋನ್ನಲ್ಲಿದೆ. ಪ್ರಧಾನಿಯವರು ನನ್ನ ಫೋನ್ ಟ್ಯಾಪ್ ಮಾಡುವುದರಿಂದ ಅವರಿಗೆ ಅದು ತಿಳಿದಿದೆ” ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ವಿದೇಶಿ ಶಕ್ತಿಗಳಿಂದ ನಿಯಂತ್ರಿಸಲ್ಪಡುತ್ತಿದ್ದಾರೆ ಎಂಬ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದಾಗಲೂ ರಾಹುಲ್ ಗಾಂಧಿ ಇದೇ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಆದರೆ, ಫೋನ್ ಕದ್ದಾಲಿಕೆಯ ಆರೋಪವನ್ನು ದೃಢಪಡಿಸುವ ಯಾವುದೇ ತಾಂತ್ರಿಕ ಅಥವಾ ಸ್ವತಂತ್ರ ಸಾಕ್ಷ್ಯವನ್ನು ಅವರು ಈ ಸಂದರ್ಭದಲ್ಲಿ ಒದಗಿಸಿಲ್ಲ.
ಮುಕ್ತ ಚರ್ಚೆಗೆ ಮತ್ತೆ ಸವಾಲು
ಇದೇ ವೇಳೆ ಪ್ರಧಾನಿ ಮೋದಿಯವರಿಗೆ ರಾಹುಲ್ ಗಾಂಧಿ ಮತ್ತೊಮ್ಮೆ ಬಹಿರಂಗ ಚರ್ಚೆಯ ಸವಾಲು ಹಾಕಿದ್ದಾರೆ. ವಿದೇಶಿ ಶಕ್ತಿಗಳಿಂದ ಯಾರು ಸಹಾಯ ಪಡೆಯುತ್ತಿದ್ದಾರೆ ಮತ್ತು ದೇಶವಿರೋಧಿ ಚಟುವಟಿಕೆಗಳಿಗೆ ಯಾರು ಸಂಬಂಧ ಹೊಂದಿದ್ದಾರೆ ಎಂಬ ವಿಚಾರದಲ್ಲಿ ಪ್ರಧಾನಿ ತಮ್ಮೊಂದಿಗೆ ಮುಖಾಮುಖಿ ಚರ್ಚೆಗೆ ಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಚರ್ಚೆಯಲ್ಲಿ ಪ್ರಧಾನಿ ಮೋದಿ ವಿದೇಶಿ ನೆರವು ಪಡೆಯುತ್ತಿದ್ದಾರೆ ಹಾಗೂ ರಾಷ್ಟ್ರವಿರೋಧಿ ನಿಲುವು ಹೊಂದಿದ್ದಾರೆ ಎಂಬುದನ್ನು ತಾವು ಸಾಬೀತುಪಡಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಆದರೆ, ರಾಹುಲ್ ಗಾಂಧಿಯವರ ಈ ಸವಾಲನ್ನು ಬಿಜೆಪಿ ತಿರಸ್ಕರಿಸಿದೆ. ಸಂಸತ್ತಿನಲ್ಲಿ ಚರ್ಚೆಗೆ ಅವಕಾಶವಿದ್ದರೂ, ವಿರೋಧ ಪಕ್ಷದ ನಾಯಕರು ಅಲ್ಲಿ ಚರ್ಚೆಯಲ್ಲಿ ಭಾಗವಹಿಸುವ ಬದಲು ಆರೋಪ ಮಾಡಿ ಹಿಂದೆ ಸರಿಯುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.
‘ಹಿಟ್ ಅಂಡ್ ರನ್’ ಆರೋಪ
ಎನ್ಡಿಎಯ ಪ್ರಮುಖ ಮಿತ್ರಪಕ್ಷವಾದ ಜೆಡಿಯು ಕೂಡ ರಾಹುಲ್ ಗಾಂಧಿಯವರ ಮುಕ್ತ ಚರ್ಚೆಯ ಸವಾಲನ್ನು ಟೀಕಿಸಿದೆ. ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ, ರಾಹುಲ್ ಗಾಂಧಿ “ಹಿಟ್ ಅಂಡ್ ರನ್” ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಸತ್ತು ನಡೆಯುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಚರ್ಚೆ ನಡೆಸಲು ಅವಕಾಶವಿದೆ. ಆದರೆ ಆರೋಪಗಳನ್ನು ಮಾಡಿ ಬಳಿಕ ಚರ್ಚೆಯಿಂದ ಹಿಂದೆ ಸರಿಯುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಇದು WWE ಕುಸ್ತಿ ಪಂದ್ಯವಲ್ಲ, ಸಂಸತ್ತಿನಲ್ಲಿ ವಿಷಯಾಧಾರಿತ ಚರ್ಚೆ ನಡೆಯಬೇಕು ಎಂದು ಝಾ ಟೀಕಿಸಿದ್ದಾರೆ.
ರಾಹುಲ್ ಗಾಂಧಿಯವರ ಫೋನ್ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಈವರೆಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆರೋಪಕ್ಕೆ ಯಾವುದೇ ಪುರಾವೆಗಳನ್ನು ರಾಹುಲ್ ಗಾಂಧಿ ಬಹಿರಂಗಪಡಿಸದಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

