ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿ ಲೋಕಸಭಾ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ.
ಬೆಳಗ್ಗೆ ದೆಹಲಿಯಿಂದ ಹೊರಟು ಚೆನ್ನೈಗೆ ಆಗಮಿಸಿದ ರಾಹುಲ್ ಗಾಂಧಿ ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣಕ್ಕೆ ಆಗಮಿಸಿದರು.
ಟಿವಿಕೆ ಮುಖ್ಯಸ್ಥ ಸಿ ಜೋಸೆಫ್ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ ಅಭಿನಂದಿಸಿದ್ದಾರೆ.
9 ಸಚಿವರ ನೇಮಕಕ್ಕೆ ರಾಜ್ಯಪಾಲರು ಅನುಮೋದನೆ
ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥರಾಗಿರುವ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಲಿದ್ದಾರೆ.
ಎಐಎಡಿಎಂಕೆ ಮತ್ತು ಡಿಎಂಕೆಯ ಸಾಂಪ್ರದಾಯಿಕ ಪ್ರಾಬಲ್ಯವನ್ನು ಮುರಿದು ರಾಜ್ಯದಲ್ಲಿ ಸರ್ಕಾರ ರಚಿಸಿದ ಮೊದಲ ದ್ರಾವಿಡೇತರ ಪಕ್ಷ ಇದಾಗಿದೆ.
ಏತನ್ಮಧ್ಯೆ, 9 ಸಚಿವರ ನೇಮಕಕ್ಕೆ ಮುಖ್ಯಮಂತ್ರಿಯಾಗಿ ನಿಯೋಜಿತ ವಿಜಯ್ ಅವರ ಶಿಫಾರಸನ್ನು ಅರ್ಲೇಕರ್ ಅನುಮೋದಿಸಿದ್ದಾರೆ ಎಂದು ಲೋಕಭವನ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಸಚಿವ ಸಂಪುಟವು ಮಹಿಳಾ ಸಚಿವೆ ಎಸ್ ಕೀರ್ತನಾ ಅವರನ್ನು ಒಳಗೊಂಡಿದೆ.
“ಮುಖ್ಯಮಂತ್ರಿಯಾಗಿ ನಿಯೋಜಿತರಾದ ಸಿ ಜೋಸೆಫ್ ವಿಜಯ್ ಮೇ 9 ರಂದು ಸಚಿವರಾಗಿ ನೇಮಕಗೊಳ್ಳಲು ಒಂಬತ್ತು ಜನರ ಪಟ್ಟಿಯನ್ನು ಶಿಫಾರಸು ಮಾಡಿದ್ದಾರೆ. ಸಚಿವರ ನೇಮಕಕ್ಕೆ ಸಂಬಂಧಿಸಿದ ಶಿಫಾರಸನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ” ಎಂದು ಪ್ರಕಟಣೆ ತಿಳಿಸಿದೆ.
‘ಬಸ್ಸಿ’ ಎನ್ ಆನಂದ್, ಆಧವ್ ಅರ್ಜುನ, ಕೆ ಎ ಸೆಂಗೋಟ್ಟೈಯನ್, ಕೆ ಜಿ ಅರುಣ್ರಾಜ್, ಪಿ ವೆಂಕಟರಮಣನ್, ಸಿ ಟಿ ಆರ್ ನಿರ್ಮಲ್ ಕುಮಾರ್, ಎ ರಾಜಮೋಹನ್, ಕೀರ್ತನಾ ಮತ್ತು ಕೆ ಟಿ ಪ್ರಭು ಸೇರಿದಂತೆ ವಿಜಯ್ ಅವರ ಹೊಸ ಸಚಿವ ಸಂಪುಟಕ್ಕೆ ಅರ್ಲೇಕರ್ ಪ್ರಮಾಣ ವಚನ ಬೋಧಿಸುವ ನಿರೀಕ್ಷೆಯಿದೆ.
ಮೇ 13 ರಂದು ಅಥವಾ ಅದಕ್ಕೂ ಮೊದಲು ವಿಶ್ವಾಸ ಮತದ ಮೂಲಕ ವಿಜಯ್ ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸುವ ನಿರೀಕ್ಷೆಯಿದೆ.

