ಟೀಮ್ ಇಂಡಿಯಾದ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ ಅವರು ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಅವರ ಬಾಲ್ಯದ ಗೆಳೆಯರು ಹಾಗೂ ಸಹಪಟುಗಳು ರಹಾನೆ ಅವರ ಸರಳತೆ, ಕಠಿಣ ಪರಿಶ್ರಮ ಮತ್ತು ಮಾನವೀಯ ಗುಣಗಳನ್ನು ಕೊಂಡಾಡಿದ್ದಾರೆ.
ಮುಂಬೈನ ಮೂಲದ ರಹಾನೆ ಅವರ ಆರಂಭಿಕ ದಿನಗಳು ಸವಾಲುಗಳಿಂದ ಕೂಡಿದ್ದವು. ಯುವ ಹಂತದ ಕ್ರಿಕೆಟ್ ಆಡುವಾಗ ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು, ಒಂದು ಕಿಲೋಮೀಟರ್ ನಡೆದು ಬಸ್ ಮತ್ತು ಲೋಕಲ್ ರೈಲು ಹಿಡಿದು ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ತಲುಪುತ್ತಿದ್ದರು. ದಿನವಿಡೀ ತರಬೇತಿ ಮುಗಿಸಿ ರಾತ್ರಿ 8 ಗಂಟೆಗೆ ಮನೆಗೆ ಮರಳುತ್ತಿದ್ದ ಅವರು, ಮಧ್ಯಾಹ್ನದ ಊಟದ ಜೊತೆಗೆ ವಡಾಪಾವ್ ತಿಂದೇ ಕಠಿಣ ಅಭ್ಯಾಸ ಮಾಡುತ್ತಿದ್ದರು.
ಮೈದಾನದಲ್ಲಿ ಶಿಸ್ತಿನ ಆಟಗಾರನಾಗಿದ್ದ ರಹಾನೆ, ವೈಯಕ್ತಿಕ ಜೀವನದಲ್ಲೂ ಅಷ್ಟೇ ಧನಾತ್ಮಕ ಚಿಂತನೆ ಹೊಂದಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮ್ಮ ಬಾಲ್ಯದ ಕೋಚ್ ವಿದ್ಯಾ ಪರಡ್ಕರ್ ಅವರ ಆಸ್ಪತ್ರೆ ವೆಚ್ಚಗಳನ್ನು ರಹಾನೆ ಯಾರಿಗೂ ತಿಳಿಯದಂತೆ ರಹಸ್ಯವಾಗಿ ಭರಿಸಿದ್ದರು. ಈ ವಿಚಾರ ಅವರ ಕೋಚ್ ನಿಧನದ ನಂತರವೇ ಜಗತ್ತಿಗೆ ತಿಳಿಯಿತು. ಜೊತೆಗೆ ಕಿರಿಯ ಆಟಗಾರರಿಗೆ ತಮ್ಮ ಕ್ರಿಕೆಟ್ ಕಿಟ್ ಹಾಗೂ ಸಲಕರಣೆಗಳನ್ನು ನೀಡಿ ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದರು.
ರಹಾನೆ ಟೀಮ್ ಇಂಡಿಯಾವನ್ನು 11 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿ, 8 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಅಲ್ಲದೆ, ಮುಂಬೈ ರಣಜಿ ತಂಡದ ನಾಯಕನಾಗಿ ರಣಜಿ ಟ್ರೋಫಿ, ವಿಜಯ್ ಹಜಾರೆ, ಮುಷ್ತಾಕ್ ಅಲಿ ಹಾಗೂ ಇರಾನಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಶ್ರೇಷ್ಠ ನಾಯಕ ಎನಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಸರಳ ಹಾಗೂ ಗೌರವಾನ್ವಿತ ಕ್ರಿಕೆಟಿಗರಲ್ಲಿ ರಹಾನೆ ಹೆಸರು ಎಂದಿಗೂ ಚಿರಸ್ಥಾಯಿಯಾಗಿರಲಿದೆ.

