ರಾಜ್ಯಸಭಾ ಉಪನಾಯಕನ ಹುದ್ದೆಯಿಂದ ವಜಾಗೊಂಡಿದ್ದ ರಾಘವ್ ಚಡ್ಡಾ ಇತ್ತೀಚೆಗಷ್ಟೆ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಆಪ್ ಪಕ್ಷದ ಏಳು ರಾಜ್ಯಸಭಾ ಸಂಸದರ ಬಿಜೆಪಿ ಸೇರ್ಪಡೆಗೊಂಡಿದ್ದರು.
ರಾಜ್ಯಸಭೆಯಲ್ಲಿ ಆಪ್ ಹೊಂದಿದ್ದ 10 ಸಂಸದರ ಪೈಕಿ 7 ಮಂದಿ (2/3 ಕ್ಕಿಂತ ಹೆಚ್ಚು) ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸುವ ಮೂಲಕ ಶಾಕ್ ನೀಡಿದ್ದರು.
ಈ ಹಿಂದೆ ತಾನೇ ವಿರೋಧಿಸುತ್ತಿದ್ದ ಬಿಜೆಪಿ ಪಕ್ಷದ ಬಾಲ ಹಿಡಿದ ರಾಘವ್ ಚಡ್ಡಾ ಕಂಡು ಜನತೆ ಗೊಂದಲಕ್ಕೊಳಗಾದರು. ಈತನ ಮಾತುಗಳನ್ನು ಕೇಳಿ ಇಂಥ ನಾಯಕ ಬೇಕು ಎಂದಿದ್ದ ಜನರು ಈತನ ನಡೆ ಕಂಡು ಈತ ಸಹ ಎಲ್ಲರಂತೆ ಶುದ್ಧವಿಲ್ಲದ ರಾಜಕಾರಣಿ ಎಂದು ಅಳೆದುತೂಗಿಬಿಟ್ಟರು.
ಇದರ ಬೆನ್ನಲ್ಲೇ ಇದೇ ರಾಘವ್ ಚಡ್ಡಾ ತಾನು ಸೇರ್ಪಡೆಗೊಂಡಿರುವ ಬಿಜೆಪಿ ಪಕ್ಷದ ಕುರಿತು ಈ ಹಿಂದೆ ಆಡಿದ ಹೀನಾಯ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೊಗಳ ಮೂಲಕ ವೈರಲ್ ಆಗಿವೆ.
ಇಂಥಹ ಹತ್ತು ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಒಂದು ವಿಡಿಯೊದಲ್ಲಿ ರಾಘವ್ ಚಡ್ಡಾ ‘ಬಿಜೆಪಿ ಎಂದರೆ ಭಾರತೀಯ ಜಾಹಿಲ್ ಪಾರ್ಟಿ. ಬಿಜೆಪಿ ಗೂಂಡಾಗಳ ಪಕ್ಷ’ ಎಂದು ಕಿಡಿಕಾರಿದ್ದರು.
ಮತ್ತೊಂದು ವಿಡಿಯೊದಲ್ಲಿ ಅಮೆರಿಕಾದಂತಹ ದೇಶದಲ್ಲಿ ಯಾರಾದರೂ ಗಲಭೆ ಎಬ್ಬಿಸಿದರೆ ಅಂಥವರನ್ನು ಪೊಲೀಸರು ಹಿಡಿದು ಜೈಲಿಗೆ ಹಾಕುತ್ತಾರೆ. ಆದರೆ ಭಾರತದಲ್ಲಿ ಅಂಥವರು ಬಿಜೆಪಿ ಸೇರುತ್ತಾರೆ ಎಂದು ರಾಘವ್ ಹೇಳಿಕೊಂಡಿದ್ದರು.
ಹಾಗೆಯೇ ಯುರೋಪ್‌ನಲ್ಲಿ ಯಾರಾದರೂ ನಿಮ್ಮ ತಾಯಿ ಅಥವಾ ಸಹೋದರಿಯರಿಗೆ ಕಿರುಕುಳ ನೀಡಿದರೆ ಅಂಥವರನ್ನು ಜೈಲಿಗೆ ಹಾಕುತ್ತಾರೆ. ಆದರೆ ಹಿಂದೂಸ್ಥಾನದಲ್ಲಿ ಅಂಥವರು ಬಿಜೆಪಿಗೆ ಹೋಗುತ್ತಾರೆ ಎಂದಿದ್ದರು.
ಬಿಜೆಪಿ ಯಾವತ್ತೂ ಸಹ ನಿಮಗಾಗಿ ಶಾಲೆ ಅಥವಾ ಕಾಲೇಜುಗಳನ್ನು ನಿರ್ಮಿಸುವುದಿಲ್ಲ, ಏಕೆಂದರೆ ಬಿಜೆಪಿಗೆ ಅನಕ್ಷರಸ್ಥ ಗೂಂಡಾಗಳ ಸೈನ್ಯ ಬೇಕಿದೆ ಎಂದೂ ಸಹ ರಾಘವ್ ಚಡ್ಡಾ ಚಾಟಿ ಬೀಸಿದ್ದರು.
ಬಿಜೆಪಿ ಎಂದಿಗೂ ಸಹ ನಿರುದ್ಯೋಗದ ಕುರಿತು ಯಾವುದೇ ಯೋಜನೆ ತರುವುದಿಲ್ಲ. ಒಂದುವೇಳೆ ತಂದರೆ ಅವರಿಗೆ ಗೂಂಡಾಗಳು ಹೇಗೆ ಬಿಜೆಪಿ ಸೇರಲು ಸಾಧ್ಯ ಎಂದು ರಾಘವ್ ಚಡ್ಡಾ ಟೀಕಿಸಿದ್ದರು.

