ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗುಂಡ್ನ ದಾಳಿ ನಡೆಸಿದ್ದು, ಟ್ರಂಪ್ ಟೇಬಲ್ ಕೆಳಗೆ ಕುಳಿತು ರಕ್ಷಿಸಿಕೊಂಡಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಗಳು ಅವರನ್ನು ಸುತ್ತಿವರಿದು ಬೇರೆಡೆ ಸ್ಥಳಾಂತರಿಸಿರುವ ಘಟನೆ ನಡೆದಿದೆ.
ವಾಷಿಂಗ್ಟನ್ ನ ಹಿಲ್ಟನ್ ಹೋಟೆಲ್ ನಲ್ಲಿ ವರದಿಗಾರರ ಔತಣಕೂಟದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿ ಗುಂಡಿನ ದಾಳಿ ನಡೆಸುತ್ತಿದ್ದಂತೆ ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಡೊನಾಲ್ಡ್ ಟ್ರಂಪ್ ಅವರನ್ನು ರಕ್ಷಿಸಿ ಬೇರೆಡೆ ಕರೆದೊಯ್ದಿದ್ದಾರೆ. ಇದೇ ವೇಳೆ ದಾಳಿಕೋರನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಗುಂಡಿನ ದಾಳಿ ಬಳಿಕ ಮಾತನಾಡಿರುವ ಡೊನಾಲ್ಡ್ ಟ್ರಂಪ್, ನನ್ನ ಮೇಲಿನ ದಾಳಿ ಇದೇ ಮೊದಲೇನಲ್ಲ. ಈ ಹಿಂದೆಯೂ ನನ್ನ ಮೇಲೆ ದಾಳಿ ನಡೆದಿತ್ತು. ಪ್ರಸ್ತುತ ನಡೆದ ದಾಳಿಯಲ್ಲಿ ಸೀಕ್ರೇಟ್ ಸರ್ವಿಸ್ ನನ್ನನ್ನು ರಕ್ಷಿಸಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಎಲ್ಲರೂ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಎಲ್ಲರೂ ಸುರಕ್ಷಿತರಾಗಿದ್ದಾರೆ. ಇನ್ನು ದಾಳಿ ಕೋರನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಅತನನ್ನು ಥಾಮಸ್ ಅಲೆನ್ (31) ಎಂದು ಗುರುತಿಸಲಾಗಿದೆ. ದಾಳಿಕೋರ ಕ್ಯಾಲಿಫೋರ್ನಿಯಾದ ಟೊರೆನ್ಸ್ ನಿವಾಸಿ ಎಂದು ತಿಳಿದುಬಂದಿದೆ. ಆತ ಒಬ್ಬ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಟ್ರಂಪ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸಂಪುಟ ಸದಸ್ಯರೂ ಕೂಡ ಇದ್ದರ್. ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಶ್ವೇತಭವನದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆಯ ನಂತರ ರಾಷ್ಟ್ರೀಯ ಗಾರ್ಡ್ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದ್ದು, ಭದ್ರತೆಯನ್ನು ತೀವ್ರಗೊಳಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಮೇಲೆ ಈ ಹಿಂದೆ ಜುಲೈ 13, 2024 ರಂದು ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ದಾಳಿ ನಡೆದಿತ್ತು. ಅಂದು ಕಿವಿಗೆ ಗುಂಡು ತಗುಲಿ ಕೂದಲೆಳೆಯ ಅಂತರದಲ್ಲಿ ಟ್ರಂಪ್ ಪಾರಾಗಿದ್ದರು. ಇಂದು ಮತ್ತೆ ಅಂತಹದ್ದೇ ಶೂಟೌಟ್ ನಡೆದಿದ್ದು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಪದೇ ಪದೇ ಟ್ರಂಪ್ ಗುರುಯಾಗಿಸು ನಡೆಯುತ್ತಿರುವ ದಾಳಿ ಅಮೆರಿಕದ ನಾಯಕರ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ.

