ಕಲಬುರಗಿ: ಪಿಎಸ್ ಐ ನೇಮಕಾತಿ ಹಗರಣದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ನನ್ನು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರು ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.
ಪಿಎಸ್ ಐ ನೇಮಕಾತಿ ಹಗರಣದಲ್ಲಿ ಜೈಲು ಸೇರಿರುವ ಆರ್.ಡಿ.ಪಾಟೀಲ್, ಕಲಬುರಗಿ ಕಾರಾಗೃಹದಲ್ಲಿ ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಸರಣಿ ವಿವಾದಗಳನ್ನು ಸೃಷ್ಟಿಸುತ್ತಿದ್ದ ಹಿನ್ನೆಲೆಯಲ್ಲಿ ಆರ್.ಡಿ.ಪಾಟಿಲ್ ನನ್ನು ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ.
ಕೆಲ ದಿನಗಳ ಹಿಂದೆ ಕಲಬುರಗಿ ಕಾರಾಗೃಹದಲ್ಲಿ ಕೈದಿಗಳು ಜೂಜಾಟಟದಲ್ಲಿ ತೊಡಗಿರುವ, ಮದ್ಯ ಸೇವನೆ ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕೃತ್ಯದ ಹಿಂದೆ ಆರ್.ಡಿ.ಪಾಟೀಲ್ ಕೈವಾಡವಿದೆ ಎಂಬುದು ತನಿಖೆಯಲ್ಲಿ ದೃಢವಾಗಿತ್ತು. ಜೈಲಿನ ವಾತಾವರಣವನ್ನೇ ಆರ್.ಡಿ.ಪಾಟಿಲ್ ಕೆಡಿಸುತ್ತಿದ್ದಾನೆ ಎಂಬ ಆರೋಪವೂ ಇತ್ತು.
ಅಲ್ಲದೇ ಕಲಬುರಗಿ ಜೈಲಿನ ಮುಖ್ಯ ಅಧೀಕ್ಷಕರ ವಿರುದ್ಧವೇ ಲಂಚದ ಆರೋಪ ಮಾಡಿದ್ದ ಆರ್.ಡಿ.ಪಾಟೀಲ್, ಬಳಿಕ ಪೆನ್ ಡ್ರೈವ್ ಮೂಲಕ ಅಕ್ರಮ ವಿಡಿಯೋ ವೈರಲ್ ಮಾಡಿಸಿ ಇಲಾಖೆಗೆ ಮುಜುಗರವನ್ನುಂಟು ಮಾಡಿದ್ದ. ಈ ಘಟನೆಗಳ ಬೆನ್ನಲ್ಲೇ ಕಾರಾಅಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಕಲಬುರಗಿ ಕಾಅರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಆರೋಪಿ ಆರ್.ಡಿ.ಪಾಟೀಲ್ ನನ್ನು ಕಲಬುರಗಿ ಜೈಲಿನಿಂದ ಮೈಸೂರು ಜೈಲಿಗೆ ಸ್ಥಳಾಂತರಿಸಿ ಆದೇಶ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಆರ್.ಡಿ.ಪಾಟೀಲ್ ನನ್ನು ಶಿಫ್ಟ್ ಮಾಡಲಾಗಿದೆ.

