ಬೆಂಗಳೂರು: ಬಿಡದಿ ಟೌನ್ ಶಿಪ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಹೋರಾಟ ಮಾಡುತ್ತೇವೆ. ನಾವು ರೈತರ ಪರ ಇದ್ದೇವೆ. ನಾಳೆ ಜೆಡಿಎಸ್ ಪಾದಯಾತ್ರೆಗೆ ಚಾಲನೆ ನೀಡಲಿದ್ದು, ಪಾದಯಾತ್ರೆಯಲ್ಲಿ ನಾವು ಕೂಡ ಸಾಂಕೇತಿಕವಾಗಿ ಪಾಲ್ಗೊಳ್ಳುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಬೆಂಗಳೂರು ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಡೆದಿದ್ದು, ಸಭೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ಮಾಡುತ್ತಿದೆ. ಇದಕ್ಕಾಗಿ ನಾವು ಜೊತೆಯಾಗಿ ಹೋರಾಟ ಮಾಡುತ್ತೇವೆ ಎಂದರು.
ನಾಳೆ ಪಾದಯಾತ್ರೆಯಲ್ಲಿ ನಾನು, ಕುಮಾರಸ್ವಾಮಿ ಭಾಗಿಯಾಗುತ್ತೇವೆ. ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಮಾಡಲಿದ್ದಾರೆ. ನಮ್ಮ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿ ಅಂತ ಕರೆ ಕೊಡುತ್ತೇವೆ. ಅಧಿವೇಶನ ನಡೆಯುವ ಸಮಯದಲ್ಲಿ ಬಿಡದಿ ವಿಚಾರವಾಗಿ ನಾವು, ಜೆಡಿಎಸ್ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು.
ಫ್ರೀಡಂ ಪಾರ್ಕ್ನಲ್ಲಿ ಸಮಾವೇಶ ಮಾಡುತ್ತೇವೆ. ಸದನದಲ್ಲಿ ಒಟ್ಟಾಗಿ ಹೋರಾಟ ಮಾಡುತ್ತೇವೆ. ಬರ, ನೈಸ್, ಕೆ.ಪಿ.ಎಸ್.ಸಿ ಅಕ್ರಮ, ಬಿಡದಿ ವಿಚಾರ ಸದನದಲ್ಲಿ ಚರ್ಚೆ ಮಾಡುತ್ತೇವೆ. ಜೆಡಿಎಸ್ ಇದಕ್ಕೆ ಬೆಂಬಲಿಸುತ್ತದೆ. ಮುಂದೆ ನಡೆಯುವ ಎಲ್ಲ ಹೋರಾಟಗಳನ್ನೂ ಒಟ್ಟಾಗಿ ಮಾಡುತ್ತೇವೆ. ಎರಡು ಮೂರು ದಿನದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚನೆ ಮಾಡುತ್ತೇವೆ. ಹೈಕಮಾಂಡ್ ಜೊತೆ ಮಾತನಾಡಿದ್ದೇವೆ. ಕೇಂದ್ರದ ಸಚಿವರು ಸಮಿತಿಯಲ್ಲಿ ಇರುತ್ತಾರೆ. ಚುನಾವಣೆ ಹತ್ತಿರ ಬರುತ್ತಿದೆ. ಹೀಗಾಗಿ ಒಟ್ಟಾಗಿ ಹೋಗುವ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತುರ್ತು ಶಿಕಾರಿಪುರಕ್ಕೆ ಹೋಗಿದ್ದರಿಂದ ಸಭೆಗೆ ಬಂದಿಲ್ಲ. ಸಚಿವ ಬಿ.ನಾಗೇಂದ್ರ ವಿಚಾರದ ಇನ್ನೂ ತೀರ್ಮಾನ ಆಗಿಲ್ಲ. ಸದನ ಪ್ರಾರಂಭ ಆದಾಗ ಇಬ್ಬರೂ ಕೂತು ಚರ್ಚೆ ಮಾಡುತ್ತೇವೆ. ಜಂಟಿ ಶಾಸಕಾಂಗ ಸಭೆ ನಡೆಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದರು.

