HomeKarnatakaBREAKING : ಬೆಂಗಳೂರಲ್ಲಿ ಪಟಾಕಿ ಸಿಡಿದು 83 ಮಂದಿಗೆ ಗಾಯ ; ವಿವಿಧ ಆಸ್ಪತ್ರೆಗಳಿಗೆ ದಾಖಲು

BREAKING : ಬೆಂಗಳೂರಲ್ಲಿ ಪಟಾಕಿ ಸಿಡಿದು 83 ಮಂದಿಗೆ ಗಾಯ ; ವಿವಿಧ ಆಸ್ಪತ್ರೆಗಳಿಗೆ ದಾಖಲು

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಸಿಡಿತ ಹಲವರ ಪಾಲಿಗೆ ಸಂಕಷ್ಟ ತಂದಿದೆ. ಬಣ್ಣಬಣ್ಣದ ಪಟಾಕಿಗಳ ಬೆಳಕಿನಲ್ಲಿ ಹಬ್ಬ ಆಚರಿಸುತ್ತಿದ್ದವರು ಕಣ್ಣಿನ ಗಾಯಗಳಿಗೆ ತುತ್ತಾಗಿದ್ದಾರೆ. ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಸಿಡಿತದಿಂದ ಒಟ್ಟು 82 ಮಂದಿ ಗಾಯಗೊಂಡಿದ್ದು, ಆರು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಿಂಟೋ ಆಸ್ಪತ್ರೆಯಲ್ಲಿ 20 ಮಂದಿ ದಾಖಲು

ಭಾನುವಾರ ರಾತ್ರಿ ಆರಂಭವಾಗಿ ಸೋಮವಾರ ಮಧ್ಯಾಹ್ನದವರೆಗೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 20 ಮಂದಿ ದಾಖಲಾಗಿದ್ದಾರೆ. ಇವರಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನು 16 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

29 ಮಂದಿಗೆ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ

ಬನ್ನೇರುಘಟ್ಟ, ಬೊಮ್ಮಸಂದ್ರ ಮತ್ತು ವೈಟ್‌ಫೀಲ್ಡ್‌ನಲ್ಲಿರುವ ನಾರಾಯಣ ನೇತ್ರಾಲಯಗಳ ಆಸ್ಪತ್ರೆಗಳಲ್ಲಿ ಪಟಾಕಿಯಿಂದ ಕಣ್ಣಿಗೆ ಗಾಯಗೊಂಡ 29 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಗಾಯಾಳುಗಳಲ್ಲಿ 15 ಮಕ್ಕಳು ಸೇರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವರಲ್ಲಿ ಏಳು ಮಂದಿ ದಾರಿಹೋಕರು ಹಾಗೂ 22 ಮಂದಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ಪಟಾಕಿ ಸಿಡಿಸುವವರಷ್ಟೇ ಅಲ್ಲದೆ, ಪಕ್ಕದಲ್ಲಿ ನಿಂತಿದ್ದವರು ಮತ್ತು ರಸ್ತೆಯಲ್ಲಿ ಸಂಚರಿಸುತ್ತಿದ್ದವರೂ ಅವಘಡಕ್ಕೆ ಸಿಲುಕಿರುವುದು ಆತಂಕ ಮೂಡಿಸಿದೆ.

ರಾಜಾಜಿನಗರ ನಾರಾಯಣ ನೇತ್ರಾಲಯದಲ್ಲಿ 31 ಮಂದಿಗೆ ಚಿಕಿತ್ಸೆ

ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಅವಘಡದಿಂದ ಗಾಯಗೊಂಡ 31 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 15 ಪುರುಷರು ಮತ್ತು 16 ಮಹಿಳೆಯರು ಸೇರಿದ್ದಾರೆ.

12 ಮಂದಿ ಪಟಾಕಿ ಸಿಡಿಸುವುದನ್ನು ಪಕ್ಕದಲ್ಲಿ ನಿಂತು ನೋಡುತ್ತಿದ್ದಾಗ ಗಾಯಗೊಂಡಿದ್ದಾರೆ. ಎಂಟು ಮಂದಿ ಸ್ವತಃ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದಾರೆ. ಉಳಿದವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪಟಾಕಿ ಸಿಡಿದು ಗಾಯಗೊಂಡಿದ್ದಾರೆ. ನಗರದ ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿಯೂ ಒಬ್ಬರು ದಾಖಲಾಗಿದ್ದಾರೆ.

53 ವರ್ಷದ ಮಹಿಳೆಯ ಕಣ್ಣಿನ ರೆಟಿನಾಗೆ ಗಂಭೀರ ಹಾನಿ

ಪಟಾಕಿ ಅವಘಡದಲ್ಲಿ 53 ವರ್ಷದ ಮಹಿಳೆಯೊಬ್ಬರ ಕಣ್ಣಿಗೆ ಗಂಭೀರ ಹಾನಿಯಾಗಿದೆ. ಮೇಲಿನ ಮನೆಯಿಂದ ಉರಿಯುತ್ತಿದ್ದ ಹೂಕುಂಡ ಬಂದು ಬಡಿದ ಪರಿಣಾಮ ಮಹಿಳೆಯ ಎರಡೂ ಕಣ್ಣುಗಳಿಗೆ ಸುಟ್ಟ ಗಾಯಗಳಾಗಿವೆ. ಇವರ ಎಡಗಣ್ಣಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.ಆದರೆ, ಕಣ್ಣಿನ ರೆಟಿನಾ ಸಂಪೂರ್ಣ ಹಾನಿಗೊಳಗಾಗಿರುವುದರಿಂದ ಮತ್ತೆ ದೃಷ್ಟಿ ಮರಳುವ ಬಗ್ಗೆ ವೈದ್ಯರು ಯಾವುದೇ ಭರವಸೆ ನೀಡಿಲ್ಲ ಎನ್ನಲಾಗಿದೆ. ಆಸ್ಪತ್ರೆಗೆ ಕರೆತಂದ ಬಳಿಕ ವೈದ್ಯರು ಅತ್ಯಂತ ಜಾಗರೂಕತೆಯಿಂದ ಕಣ್ಣಿನ ಆರೈಕೆ ಮಾಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಪಟಾಕಿ ಸಿಡಿಸುವಾಗ ಎಚ್ಚರಿಕೆ ಅಗತ್ಯ

ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸದಿದ್ದರೆ ಗಂಭೀರ ಕಣ್ಣಿನ ಗಾಯಗಳು ಸಂಭವಿಸಬಹುದು. ವಿಶೇಷವಾಗಿ ಮಕ್ಕಳು ಪಟಾಕಿ ಸಿಡಿಸುವಾಗ ದೊಡ್ಡವರು ಜೊತೆಯಲ್ಲಿರಬೇಕು. ದಾರಿಹೋಕರು ಹಾಗೂ ಸುತ್ತಮುತ್ತಲಿನ ಜನರ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಕ್ಷಣಿಕ ಸಂಭ್ರಮಕ್ಕಾಗಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವಂತಹ ಅಪಾಯಕ್ಕೆ ಯಾರೂ ಮೈಯೊಡ್ಡಬಾರದು.

Disclaimer: ಈ ಸುದ್ದಿಯಲ್ಲಿನ ವೈದ್ಯಕೀಯ ಮಾಹಿತಿಯನ್ನು ಲಭ್ಯವಿರುವ ವರದಿಗಳ ಆಧಾರದ ಮೇಲೆ ನೀಡಲಾಗಿದೆ. ಕಣ್ಣಿಗೆ ಗಾಯವಾದಲ್ಲಿ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular