HomeKarnatakaBIG NEWS: ರೈತರನ್ನು ಮುಟ್ಟಿದರೆ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುತ್ತೇವೆ: ಆರ್.ಅಶೋಕ್ ಎಚ್ಚರಿಕೆ

BIG NEWS: ರೈತರನ್ನು ಮುಟ್ಟಿದರೆ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುತ್ತೇವೆ: ಆರ್.ಅಶೋಕ್ ಎಚ್ಚರಿಕೆ

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ. ಈ ಬಗ್ಗೆ ಅಧಿವೇಶನದಲ್ಲೂ ಚರ್ಚೆ ಮಾಡಲಿದ್ದೇನೆ. ಇಲ್ಲಿನ ರೈತರನ್ನು ಮುಟ್ಟಲು ಬಂದರೆ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುತ್ತೇವೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದ್ದಾರೆ.

ಬಿಡದಿಯ, ಬೈರಮಂಗಲ, ಮಂಡಲಹಳ್ಳಿ ಮೊದಲಾದ ಕಡೆಗಳಲ್ಲಿ ರೈತರ ಮನೆಗಳಿಗೆ ಭೇಟಿ ನೀಡಿ ಚರ್ಚೆ ನಡೆಸಿದ ಆರ್.ಅಶೋಕ್, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ನಾಲ್ಕನೇ ಬಾರಿಗೆ ಬಿಡದಿಗೆ ಭೇಟಿ ನೀಡಿದ್ದೇನೆ. ಕಾನೂನು ಪ್ರಕಾರ ಏಳು ದಿನಗಳ ಮುನ್ನ ನೋಟಿಸ್‌ ನೀಡಿ ಸ್ವಾಧೀನ ಮಾಡಬೇಕು. ಆದರೆ ಪೊಲೀಸರು ಹಾಗೂ ಅಧಿಕಾರಿಗಳು ಏಕಾಏಕಿ ಬಂದು ದೌರ್ಜನ್ಯ ಮಾಡಿದ್ದಾರೆ. ಪೊಲೀಸರು ಮಹಿಳೆಯರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿ ಥಳಿಸಿ, ಬಳಿಕ ರೈತರ ವಿರುದ್ಧವೇ ಕೊಲೆ ಬೆದರಿಕೆ ಪ್ರಕರಣ-307 ದಾಖಲಿಸಿದ್ದಾರೆ. ರೈತರನ್ನು ಕೊಲೆಗಾರರನ್ನಾಗಿ ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಹೋರಾಟ ಮಾಡಿದ್ದಾರೆಯೇ ಹೊರತು ಕೊಲೆ ಮಾಡಿಲ್ಲ. ತಲತಲಾಂತರದಿಂದ ಬಂದ ಜಮೀನನ್ನು ಕಸಿದುಕೊಳ್ಳಲು ಬಂದರೆ ಪ್ರತಿರೋಧ ಬರುವುದು ಸಹಜ. ಈಗ ಬೈರಮಂಗಲದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಂತಿದೆ. ರೈತರಿಗೆ ಎರಡು ತಿಂಗಳು ಸಮಯ ನೀಡಿ ಆಮಿಷ ಒಡ್ಡುತ್ತಿದ್ದಾರೆ. ನಿಮಗೆ ಇನ್ನೂ 50 ಲಕ್ಷ ರೂ. ಹೆಚ್ಚು ಕೊಡುತ್ತೇನೆ, 10 ಲಕ್ಷ ರೂ. ಕಮಿಶನ್‌ ಕೊಡುತ್ತೇನೆ ಎಂದು ಆಮಿಷ ಒಡ್ಡುತ್ತಿದ್ದಾರೆ ಎಂದರು.

ಬೈರಮಂಗಲದಲ್ಲಿ 40 ಎಕರೆ ಜಮೀನಿನಲ್ಲಿ ಸಹೋದರರು ಕೃಷಿ ಮಾಡುತ್ತಿದ್ದಾರೆ. ತೆಂಗು, ಮಾವು, ಏಲಕ್ಕಿ ಎಲ್ಲ ಬೆಳೆಗಳು ಇಲ್ಲಿವೆ. ರೆಡ್‌ ಜೋನ್‌ ಮಾಡಿರುವುದರಿಂದ ಮಾರಾಟ ಮಾಡಲು ಆಗುತ್ತಿಲ್ಲ ಎಂದು ಆರೋಪ ಮಾಡಿದ್ದರು. ಆದರೆ ಇವರಿಗೆ ಕೃಷಿ ಮಾಡಲು ಆಸಕ್ತಿ ಇದೆ. ಈ ರೈತ ಕುಟುಂಬಗಳ ಜೊತೆ ಬಿಜೆಪಿ ಸದಾ ನಿಲ್ಲಲಿದೆ. ಪೊಲೀಸರು ರೈತರನ್ನು ಮುಟ್ಟಿದರೆ ಠಾಣೆಗೆ ಮುತ್ತಿಗೆ ಹಾಕುತ್ತೇವೆ. ಪೊಲೀಸರು ಹೊರಗೆ ಬಾರದಂತೆ ಠಾಣೆಗಳನ್ನು ಮುಚ್ಚುತ್ತೇವೆ. ಸಿಎಂ ಡಿ.ಕೆ.ಶಿವಕುಮಾರ್‌ಗೆ ಪ್ರಶ್ನೆ ಮಾಡಿದರೆ ಕುಮಾರಸ್ವಾಮಿ ಆಸ್ತಿ ಬಗ್ಗೆ ಮಾತಾಡುತ್ತಾರೆ. ಇಲ್ಲಿ ಧರಣಿ ಮಾಡುತ್ತಿರುವ ರೈತರ ಜಮೀನಿನ ಬಗ್ಗೆ ಚರ್ಚೆ ಆಗಬೇಕಿದೆ. ರೈತರ ಹೋರಾಟ ಹೆಚ್ಚಾದಾಗ ವಿಷಯಾಂತರ ಮಾಡಿ ವೈಯಕ್ತಿಕ ವಿಚಾರಗಳನ್ನು ಮಾತಾಡುತ್ತಾರೆ. ರೈತರ ವಿರುದ್ಧದ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಅಧಿವೇಶನದಲ್ಲಿ ಈ ಕುರಿತು ನಾನು ಮಾತಾಡುತ್ತೇನೆ. ಆದರೆ ಸಿಎಂ ಡಿ.ಕೆ.ಶಿವಕುಮಾರ್‌ ಸದನ ಸಮಿತಿ ರಚಿಸಿ ರಕ್ಷಣೆ ಮಾಡಿಕೊಂಡಿದ್ದಾರೆ. ಈ ಹಿಂದೆ ಎಚ್‌.ಕೆ.ಪಾಟೀಲ್‌ ನೇತೃತ್ವದ ಸಮಿತಿ ರಚಿಸಿ ಇದನ್ನು ವಿರೋಧಿಸಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಯೋಜನೆ ವಿರೋಧಿಸಿದ್ದರು. ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸ್ವಾಧೀನ ಮಾಡಿರಲಿಲ್ಲ. ಅದರ ಬಗ್ಗೆ ಕೇವಲ ಚರ್ಚೆ (ಪ್ರೊಸೀಡಿಂಗ್ಸ್‌-ನಡಾವಳಿ) ನಡೆದಿತ್ತು. ಬಿಜೆಪಿ ಅವಧಿಯಲ್ಲಿ ಒಬ್ಬೇ ಒಬ್ಬ ರೈತರಿಗೆ ನೋಟಿಸ್‌ ನೀಡಿರಲಿಲ್ಲ, ಸ್ವಾಧೀನದ ಬಗ್ಗೆ ಚರ್ಚೆ ನಡೆದಿರಲಿಲ್ಲ. ಡಿ.ವಿ.ಸದಾನಂದಗೌಡರು ಸಿಎಂ ಆಗಿದ್ದಾಗ ಒಂದು ಚರ್ಚೆ ನಡೆದಿತ್ತು. ಕೇಂದ್ರ ಸರ್ಕಾರದ ಹೊಸ ಭೂ ಸ್ವಾಧೀನ ಕಾಯ್ದೆಯನ್ನು ಜಾರಿಯಾಗಿರುವುದರಿಂದ ಬಿಡದಿ ಟೌನ್‌ಶಿಪ್‌ ಯೋಜನೆ ಜಾರಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಜಗದೀಶ್‌ ಶೆಟ್ಟರ್‌ ಸಿಎಂ ಆಗಿದ್ದಾಗಲೂ ಇದೇ ರೀತಿ ಚರ್ಚೆ ನಡೆದಿತ್ತು. ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಿದ್ದಾಗ ಅದರ ತಂಟೆಗೆ ಬರಲ್ಲ ಎಂದಿದ್ದರು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಏನೂ ಮಾಡಲಿಲ್ಲ. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಸಿದ್ದರಾಮಯ್ಯ ಸ್ವಾಧೀನಕ್ಕೆ ಆದೇಶ ಹೊರಡಿಸಿದರು. ನಂತರ ಡಿ.ಕೆ.ಶಿವಕುಮಾರ್‌ ಆಂಧ್ರ ಗುತ್ತಿಗೆದಾರನಿಗೆ ಟೆಂಡರ್‌ ನೀಡಿದ್ದಾರೆ. ಇದರಲ್ಲಿ ಬಿಜೆಪಿಯದ್ದು ಶೂನ್ಯ ಪಾತ್ರ ಎಂದರು.

ಆನೇಕಲ್‌ನಲ್ಲಿ ಹೊಸದಾಗಿ ಸ್ವಾಧೀನ ಮಾಡಲಾಗುತ್ತಿದೆ. ಸರ್ಕಾರ ಬೆಂಗಳೂರಿನ ಸುತ್ತಮುತ್ತ ಸುಮಾರು 20,000 ಎಕರೆ ಗುರುತಿಸಿ ಸ್ವಾಧೀನ ಮಾಡಲು ಮುಂದಾಗಿದೆ. ಮೂರು ರಾಜ್ಯಗಳ ಚುನಾವಣೆ ಬಂದಿರುವುದರಿಂದ ಸಿಎಂ ಡಿ.ಕೆ.ಶಿವಕುಮಾರ್‌ ರಣವೀಳ್ಯ ಪಡೆದಿದ್ದಾರೆ. ಒಂದು ತಿಂಗಳು ಕೂಡ ಸಮಯ ಕೊಡದೆ ಸಿದ್ದರಾಮಯ್ಯನವರನ್ನು ಇಳಿಸಲು ಇದೇ ಕಾರಣ. ಮೂರು ರಾಜ್ಯಗಳ ಚುನಾವಣಾ ಖರ್ಚನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಡಿ.ಕೆ.ಶಿ ಹೈಕಮಾಂಡ್‌ಗೆ ಹೇಳಿದ್ದಾರೆ.

ಈಗ ಗೋಮಾಳದಲ್ಲಿ ಲೇಔಟ್‌ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಕೂಡ ಇದೆ. ದನ ಕರು ಮೇಯಲು ಸೀಮಿತವಾದ ಜಮೀನಿನಲ್ಲಿ ಲೇಔಟ್‌ ಮಾಡಬಾರದು ಎಂಬ ಆದೇಶವೇ ಇದೆ. ಇದನ್ನು ಯಾವ ಕಾನೂನಿನಡಿ ಮಾಡುತ್ತಾರೆ ಎಂದು ಹೇಳಬೇಕು. ರಾಜ್ಯ ಸರ್ಕಾರ ಲೂಟಿ ಹೊಡೆಯಲು ಈ ಯೋಜನೆ ರೂಪಿಸಿದೆ. ಇಲ್ಲಿ ನೀರು ಕಲುಷಿತಗೊಂಡಿದೆ, ಕ್ಯಾನ್ಸರ್‌ ಬರುತ್ತದೆ ಎಂದು ಒಬ್ಬ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಲೇಔಟ್‌ ಮಾಡಿದರೆ ಜನರಿಗೆ ರೋಗ ಬರುವುದಿಲ್ಲವೇ? ರಾಜ್ಯದ ಮುಖ್ಯಮಂತ್ರಿಯಾಗಿ ನನ್ನನ್ನು ಪೊರಕೆ ತಗೊಂಡು ಹೊಡೀರಿ ಎಂದು ಬೋಗಸ್‌ ಹೇಳಿಕೆ ನೀಡಬಾರದು. ಈವರೆಗೆ ಯಾವುದೇ ಸಿಎಂ ಈ ರೀತಿ ವರ್ತಿಸಿಲ್ಲ ಎಂದರು.

ಸಿದ್ದರಾಮಯ್ಯನವರು ನಿಲುವಳಿ ಸೂಚನೆ ತಂದು ಚರ್ಚೆ ಮಾಡಿ ನೀವು ಮನೆಹಾಳರು ಎಂದು ಟೀಕಿಸಿದ್ದರು. ಆಗ ಸಿಎಂ ಕುಮಾರಸ್ವಾಮಿ, ನಾನು ರೈತರಿಗೆ ದ್ರೋಹ ಬಗೆದು ಈ ಯೋಜನೆ ಮಾಡುವುದಿಲ್ಲ. ರೈತರಿಗೆ ಬೇಡ ಎಂದರೆ ಇವತ್ತೇ ಅದನ್ನು ಬಿಡುತ್ತೇನೆ ಎಂದಿದ್ದಾರೆ. ಇದು ವಿಧಾನಸಭೆಯಲ್ಲಿ ದಾಖಲಾಗಿದೆ. ರೈತರ ಬೆನ್ನಿಗೆ ಚೂರಿ ಹಾಕಿದ್ದೀರಿ ಅಂದರೆ ಈಗ ಸಿದ್ದರಾಮಯ್ಯನವರರ ಪ್ರಕಾರ ಯಾರು ಚೂರಿ ಹಾಕುತ್ತಿದ್ದಾರೆ? ಕೋರ್ಟ್‌ಗೆ ನಾವು ಸಂಪೂರ್ಣ ಗೌರವ ನೀಡುತ್ತೇವೆ. ಮುಂದೆ ನ್ಯಾಯಾಂಗ ಹೋರಾಟವನ್ನೂ ಮಾಡುತ್ತೇವೆ ಎಂದರು.

ಇದು ಬಂಜರು ಭೂಮಿ ಎಂದು ಅಪಪ್ರಚಾರ ಮಾಡಲಾಗಿದೆ. ಆದ್ದರಿಂದ ನಾವೆಲ್ಲರೂ ಇಲ್ಲಿ ಗ್ರಾಮ ವಾಸ್ತವ್ಯ ಮಾಡಲು ತೀರ್ಮಾನಿಸಿದ್ದೇವೆ. ಜನರು ಇಲ್ಲಿ ಹೇಗೆ ಜೀವಿಸುತ್ತಿದ್ದಾರೆ ಎಂಬುದನ್ನು ಇಡೀ ರಾಜ್ಯಕ್ಕೆ ತೋರಿಸಿಕೊಡುತ್ತೇನೆ. ಅಧಿಕಾರಿಗಳು ಹಾಗೂ ಜನರಿಗೆ ಸಂದೇಶ ಹೋಗಬೇಕಿದೆ ಎಂದರು. ಬಿಡಡಿ ಟೌನ್ ಶಿಪ್ ವಿರೋಧಿಸಿ ಇಂದು ಬಿಜೆಪಿಯ ಎಲ್ಲ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular