ಬೆಂಗಳೂರು: ಸ್ವಚ್ಛ ಬೆಂಗಳೂರು ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಹೊಸ ಲೂಟಿ ಶುರು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಹಿಂದೆಯೇ ಸ್ವಚ್ಛ ಭಾರತ್ ಕಾರ್ಯಕ್ರಮ ಆರಂಭಿಸಿದ್ದರು. ರೀಲ್ಸ್ ಮಾಡಿಕೊಂಡಿರುವ ಸಚಿವ ಕೃಷ್ಣ ಭೈರೇಗೌಡ ಸ್ವಚ್ಛ ಮಾಡಲು ತೆರಿಗೆ ಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಈಗಾಗಲೇ ಇರುವ ತೆರಿಗೆಯಲ್ಲೇ ಕಸದ ನಿರ್ವಹಣೆಯೂ ಸೇರಿರುತ್ತದೆ. ಖಾಲಿ ನಿವೇಶನದಲ್ಲಿ ಕಸ ಇದ್ದರೆ ವಿವಿಧ ರೀತಿಯ ತೆರಿಗೆ ದರಗಳನ್ನು ನಿಗದಿಪಡಿಸಲಾಗಿದೆ. ಬೆಂಗಳೂರಲ್ಲಿ ಅಭಿವೃದ್ಧಿ ಮಾಡದೆ ಜನರಿಂದ ತೆರಿಗೆ ಮಾತ್ರ ವಸೂಲಿ ಮಾಡಲಾಗುತ್ತಿದೆ ಎಂದರು.
ರಸ್ತೆ ಬದಿ ನಿಂತಿರುವ ಕಾರುಗಳನ್ನು ಖಾಲಿ ಮಾಡಿಸುತ್ತೇನೆ ಎಂದಿದ್ದರು. ಈ ರೀತಿ ಒಂದು ಲಕ್ಷಕ್ಕೂ ಅಧಿಕ ಕಾರ್‌ಗಳಿವೆ. ಅದನ್ನು ಏನು ಮಾಡಿದ್ದಾರೆ ಎಂದು ತಿಳಿದಿಲ್ಲ. ಪಾದಚಾರಿ ಮಾರ್ಗ ತೆರವು ಬೆಳಗ್ಗೆ ಮಾಡಿದರೆ, ಸಂಜೆ ಮತ್ತೆ ಅಲ್ಲಿ ಬೀದಿ ಬದಿ ವ್ಯಾಪಾರಿಗಳು ಬಂದಿರುತ್ತಾರೆ. ಈಗ ಕಸದಿಂದ ಸ್ವಾತಂತ್ರ್ಯ ಎಂದು ಹೇಳಿ ತೆರಿಗೆ ಹಾಕುತ್ತಿದ್ದಾರೆ. ಕಸವಿಲ್ಲದ ಒಂದು ರಸ್ತೆಯೂ ನಗರದಲ್ಲಿಲ್ಲ. ಐದು ತಿಂಗಳಿಂದ 20 ಲಕ್ಷ ಫಲಾನುಭವಿಗಳಿಗೆ ಪಿಂಚಣಿಗಳನ್ನು ನೀಡಿಲ್ಲ. ಈ ರೀತಿ ಹಣವೇ ಇಲ್ಲದ ಸ್ಥಿತಿ ಇರುವಾಗ ಜನರಿಂದಲೇ ಹಣ ಲೂಟಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಗರದ ರಸ್ತೆಗಳಲ್ಲಿ ಇನ್ನೂ ಗುಂಡಿಗಳಿವೆ. 7 ಕಿ.ಮೀ. ಉದ್ದದ ರಸ್ತೆಯಲ್ಲಿ 300 ಗುಂಡಿಗಳಿವೆ. ಇದನ್ನು ದುರಸ್ತಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಿ. ಮನೆ ತೆರಿಗೆ ಸಂಗ್ರಹಿಸಿದ ನಂತರ ಬೇರೆ ಯಾವುದೇ ತೆರಿಗೆ ಹಾಕಬಾರದು. ಇತ್ತೀಚೆಗೆ ಫ್ಲ್ಯಾಟ್‌ಗಳಿಗೆ 40 ರೂ. ಇದ್ದ ಕಸದ ಶುಲ್ಕವನ್ನು 400 ರೂ. ಗೆ ಏರಿಸಿದ್ದಾರೆ. ಈಗ ಹೊಸ ಟೆಂಡರ್ ಕೂಡ ಮಾಡಿದ್ದಾರೆ. ಇದು ಸರ್ಕಾರವೇ ಮಾಡುತ್ತಿರುವ ದರೋಡೆಯಾಗಿದೆ. ಜಿಬಿಎ ಚುನಾವಣೆ ಬಂದರೆ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ಎಂಬ ತೀರ್ಪನ್ನು ಜನರು ನೀಡುತ್ತಾರೆ ಎಂದರು.

