ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಅರ್ಹ ಮತದಾರರ ಹೆಸರು ಕೈಬಿಡದಂತೆ ಎಚ್ಚರವಹಿಸಬೇಕು, ಭಾರತ್ ಜೋಡೋ ಸಂಘ ರಚನೆಗೆ ಗಮನಹರಿಸಬೇಕು. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳ ಜೊತೆಗಿನ ಸಂವಾದದ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಖಡಕ್ ಸೂಚನೆ ನೀಡಿದರು.
ವಿಧಾನಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳು, ನೌಕರರ ಜತೆ ಸಂವಾದ ನಡೆಸಿದ ಸಿಎಂ ಡಿ.ಕೆ.ಶಿವಕುಮಾರ್ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು. ಮಂಡ್ಯ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಅವರನ್ನು ಉದ್ದೇಶಿಸಿ “ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು, ಬಿಡಬಾರದು ಎಂಬ ತೀರ್ಮಾನದ ಜವಾಬ್ದಾರಿ ನಮ್ಮದು. ಕಾವೇರಿ ವಿಚಾರದಲ್ಲಿ ಮಂಡ್ಯದಲ್ಲಿ ಯಾವುದೇ ಆಹಿತಕರ ಘಟನೆ ನಡೆಯಬಾರದು. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಿಮ್ಮದು ಎಂದು ನಿರ್ದೇಶನ ನೀಡಿದರು.
ನೀರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕಬಿನಿ ಸಂಪೂರ್ಣ ಭರ್ತಿಯಾದರೆ ನೀರು ಹರಿಯುತ್ತದೆ. ಜಲಾಶಯದಲ್ಲಿ ನೀರು ಎಷ್ಟು ಸಂಗ್ರಹವಾಗುತ್ತದೆ ಎನ್ನುವುದರ ಆಧಾರದ ಮೇಲೆ ರೈತರು ಬೆಳೆ ಬೆಳೆಯಬೇಕಾಗುತ್ತದೆ. ಈ ವಿಚಾರದ ಬಗ್ಗೆ ಹಾಗೂ ನೀರಿನ ಸಂಗ್ರಹದ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಈಗ ನಾವು ಸಂದಿಗ್ಧ ಸ್ಥಿತಿಯಲ್ಲಿದ್ದೇವೆ. ಇಡೀ ವಿಶ್ವದಲ್ಲಿ ಹವಾಮಾನ ವೈಪರೀತ್ಯವಾಗಿದೆ. ಹಾಗಾಗಿ, ವಾಡಿಕೆಯ ಮಳೆ ನಿರೀಕ್ಷೆ ಮಾಡಲು ಆಗುತ್ತಿಲ್ಲ. ಮಳೆ ಬರಬಹುದು, ಬರದೇ ಇರಬಹುದು ಎಂದರು.
ಜನ ಮತಹಕ್ಕು ಕಳೆದುಕೊಳ್ಳಬಾರದು:
ಎಸ್ ಐಆರ್ ಬಗ್ಗೆ ಎಲ್ಲಾ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಿಜವಾದ ಮತದಾರರು ಯಾವುದೇ ಕಾರಣಕ್ಕೂ ಸಂವಿಧಾನದತ್ತ ಹಕ್ಕನ್ನು ಕಳೆದುಕೊಳ್ಳಬಾರದು. ಅದಕ್ಕೆ ನೆರವಾಗುವುದು ನಿಮ್ಮ ಕರ್ತವ್ಯ ಎಂದರು.
ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಭಾರತ್ ಜೋಡೋ ಸಂಘಗಳ ಸ್ಥಾಪನೆ ಹಾಗೂ ಪ್ರಜಾಸೇವೆಯ ಬಗ್ಗೆ ಜಾಗೃತಿ ಮೂಡಿಸಲು ಅಗತ್ಯವಿರುವ ಮಾಹಿತಿಗಳನ್ನು ಒಳಗೊಂಡ ಪಾಂಪ್ಲೆಟ್ ಸಿದ್ಧಪಡಿಸಿ ವಿತರಿಸಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ ‘ತಹಶೀಲ್ದಾರ್ ಅವರೇ, ನಿಮ್ಮಲ್ಲಿ ಎಸ್ ಐಆರ್ ಎಷ್ಟು ಪ್ರಗತಿಯಾಗಿದೆ’ ಎಂದು ಸಿಎಂ ಡಿ.ಕೆ.ಶಿವಕುಮಾರ್ ಮಹಿಳಾ ಅಧಿಕಾರಿಯೊಬ್ಬರನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಅದಕ್ಕೆ ಮಹಿಳಾ ಅಧಿಕಾರಿ “ಎಲ್ಲಾ ಚೆನ್ನಾಗಿದೆ” ಸಾರ್ ಎಂದಿದ್ದಾರೆ.
‘ಚೆನ್ನಾಗಿದೆ ಅಂದರೇನಮ್ಮಾ. ಎಷ್ಟು ಓಟ್ ಡಿಲೀಟ್ ಮಾಡಿಸಿದ್ದೀರಿ? ಎಷ್ಟು ಜನರ ಉಳಿಸಿದ್ದೀರಿ” ? ಎಂದು ಕೇಳಿದ್ದಾರೆ.
ಮುಖ್ಯಮಂತ್ರಿಗಳು ಹೀಗೆ ಪ್ರಶ್ನೆ ಕೇಳಿದಾಗ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಗೊಳ್ ಎಂದಿತು.
ತಹಶೀಲ್ದಾರರು ಉತ್ತರ ಮುಂದುವರಿಸಿ.‘ಸಾರ್, ನಮ್ಮ ಕ್ಷೇತ್ರದಲ್ಲಿ 42 ಸಾವಿರ ಓಟ್ ಡಿಲೀಟಾಗಿದೆ‘ ಎಂದಿದ್ದಾರೆ.
ಹಾಗಾದರೆ ನೀವೇಲ್ಲ ಏನ್ ಮಾಡ್ತಾ ಇದ್ದೀರಿ? ಬಿಎಲ್ ಒ, ಬಿಎಲ್ ಎ ಏನು ಮಾಡ್ತಿದ್ದಾರೆ? ನಿಜವಾದ ಮತದಾರರಿಗೆ ನೀವು ಹೇಗೆ ನೆರವಾಗುತ್ತಿದ್ದೀರಿ?’ ಎಂದು ಮುಖ್ಯಮಂತ್ರಿಗಳು ಖಡಕ್ಕಾಗಿ ಪ್ರಶ್ನೆ ಮಾಡುತ್ತಿದ್ದಂತೆ ಅಧಿಕಾರಿಗಳು ಅವಕ್ಕಾದರು.
750 ಕಡೆ 2.50 ಲಕ್ಷ ಅಧಿಕಾರಿಗಳು, ನೌಕರರು ಭಾಗಿ
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಡೆದ ಸರ್ಕಾರಿ ನೌಕರರೊಂದಿಗಿನ ವೀಡಿಯೋ ಸಂವಾದವು ರಾಜ್ಯದ 750 ಸ್ಥಳಗಳ ನಡೆಯಿತು. ಒಟ್ಟು 2.50 ಲಕ್ಷಕ್ಕೂ ಹೆಚ್ಚು ಅಧಿಕಾರಿಗಳು, ನೌಕರರು ಭಾಗವಹಿಸಿದ್ದರು. ಸಂವಾದವು ಆಯಾ ಜಿಲ್ಲೆಯಲ್ಲಿ ಆಗಿರುವ ಕಾರ್ಯಪ್ರಗತಿ ಚಿತ್ರಣವನ್ನು ತೆರೆದಿಟ್ಟಿದ್ದಲ್ಲದೇ ಎದುರಾಗಿರುವ ವಾಸ್ತವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು. ಎಷ್ಟೋ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಅಲ್ಲೇ ಪರಿಹಾರವನ್ನೂ ಸೂಚಿಸಿದರು, ಭವಿಷ್ಯದ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಿದರು.

