ಬೆಂಗಳೂರು: ಸಭಾಪತಿ ಬಸವರಾಜ್ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ಅವರನ್ನು ರಾಜ್ಯ ಸರ್ಕಾರ ನಿಯೋಜನೆ ಮಾಡಿದೆ.
ಆಗಸ್ಟ್ 13ರಿಂದ ವಿಧಾನ ಮಂಡಲ ಮಳೆಗಾಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹಂಗಾಮಿ ಸಭಾಪತಿ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಬಸವರಾಜ್ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ಆ.7ರಂದು ರಾಜೀನಾಮೆ ನೀಡಿದ್ದರು. ಆಗಸ್ಟ್ 14 ರಂದು ಸಭಾಪತಿ ಆಯ್ಕೆ ಆಗಲಿದೆ. ಕಾಂಗ್ರೆಸ್ ನ ಸಲೀಂ ಅಹಮದ್ ಸಭಾಪತಿ ಅಭ್ಯರ್ಥಿಯಾಗಿದ್ದು, ಉಮಾಶ್ರೀ ಉಪಸಭಾಪತಿ ಸ್ಥಾನದ ಅಭ್ಯರ್ಥಿಯಾಗಿದ್ದಾರೆ.
ಈ ಮುಂಚೆ ಸಿಎಂ ಡಿ.ಕೆ.ಶಿವಕುಮಾರ್ ಬಸವರಾಜ ಹೊರಟ್ಟಿಯವರನ್ನೇ ಹಂಗಾಮಿ ಸಭಾಪತಿಯಾಗಿ ಮುಂದುವರಿಸುವುದಾಗಿ ತಿಳಿಸಿದ್ದರು. ಆದರೆ, ಬಸವರಾಜ್ ಹೊರಟ್ಟಿ ಹಂಗಾಮಿ ಸಭಾಪತಿಯಾಗುವುದಕ್ಕೆ ನಿರಾಕರಿಸಿದ್ದರು. ಈ ಹಿನ್ನೆಲೆ ಇದೀಗ ಸರ್ಕಾರ ಪರಿಷತ್ ಸದಸ್ಯ ಪುಟ್ಟಣ್ಣರನ್ನು ಹಂಗಾಮಿ ಸಭಾಪತಿಯಾಗಿ ನಿಯೋಜನೆ ಮಾಡಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ನಾಯಕ ಒತ್ತಡ ಹಿನ್ನೆಲೆಯಲ್ಲಿ ಬಸವರಾಜ್ ಹೊರಟ್ಟಿ ಆ.7ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆರಂಭದಲ್ಲಿ ಆ.14ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಸವರಾಜ ಹೊರಟ್ಟಿ ಹೇಳಿದ್ದರು. ಆದರೆ ಕಾಂಗ್ರೆಸ್ ನಾಯಕರ ಒತ್ತಡ ಹೆಚ್ಚಿದ್ದರಿಂದ ಆ.7ರಂದೇ ರಾಜೀನಾಮೆ ಕೊಟ್ಟಿದ್ದರು.

