ಬೆಂಗಳೂರು: ಆಸ್ತಿ ಹಕ್ಕಿನ ಕುರಿತಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಆ ಆಸ್ತಿಯನ್ನು ಖರೀದಿಸುವ ಮೂರನೇ ವ್ಯಕ್ತಿಗೆ ಯಾವುದೇ ಕಾನೂನು ರಕ್ಷಣೆ ಲಘು ಸಿಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅಂತಹ ಆಸ್ತಿ ಮಾರಾಟವು ಮೂಲ ಒಪ್ಪಂದದಾರನ ಹಕ್ಕನ್ನು ಬಾಧಿಸುವುದಿಲ್ಲ. ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 52ರ ಪ್ರಕಾರ ನ್ಯಾಯಾಲಯದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ದಾವೆ ಹೂಡಿದ್ದಾಗ ನ್ಯಾಯಾಲಯದ ಅನುಮತಿ ಇಲ್ಲದೆ ಆ ಆಸ್ತಿಯನ್ನು ವರ್ಗಾವಣೆ ಮಾಡುವಂತಿಲ್ಲ. ಒಂದು ವೇಳೆ ಆಸ್ತಿ ವರ್ಗಾವಣೆ ಮಾಡಿದರೂ ಅದು ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಂಗಳೂರಿನ ಹನುಮಂತನಗರದ ಆಸ್ತಿ ವಿವಾದವೊಂದಕ್ಕೆ ಸಂಬಂಧಿಸಿದಂತೆ ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 52ರ ಅಡಿಯಲ್ಲಿ ಲೀಸ್ ಪೆಂಡೆನ್ಸ್ ತತ್ವ ಅನ್ವಯಿಸಿ ಮೊದಲು ಖರೀದಿಸಿದ ವ್ಯಕ್ತಿಯ ಹಕ್ಕನ್ನು ಎತ್ತಿ ಹಿಡಿದಿರುವ ನ್ಯಾಯಾಲಯ ಈ ಆದೇಶ ನೀಡಿದೆ. ಪ್ರಕರಣದ ಅರ್ಜಿದಾರ ಎಂ. ಶಿವಾನಂದ್ 1994 ರಲ್ಲಿ ಮಾಡಿಕೊಂಡಿದ್ದ ಆಸ್ತಿ ಖರೀದಿ ಒಪ್ಪಂದವನ್ನು ಮಾನ್ಯ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೃಷ್ಣಮೂರ್ತಿ ಎಂಬುವವರು ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ವಜಾಗೊಳಿಸಿ ಈ ಆದೇಶ ನೀಡಿದೆ.
ನ್ಯಾಯಾಲಯದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ದಾವೆ ಹೂಡಿದ್ದಾಗ ನ್ಯಾಯಾಲಯದ ಅನುಮತಿ ಇಲ್ಲದೆ ಆಸ್ತಿಯನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ತಿಳಿಸಿದೆ.

