ದಾವಣಗೆರೆ, ಜು.22: ಉತ್ತರ ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿರುವ ಪ್ರಸ್ತಾವಿತ ಪುಣೆ–ಬೆಂಗಳೂರು 6/8 ಲೇನ್ ನಿಯಂತ್ರಿತ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆಗೆ ತಕ್ಷಣ ಅನುಮೋದನೆ ನೀಡಿ ಆದ್ಯತೆ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.
ಗಡ್ಕರಿ ಅವರೊಂದಿಗೆ ನಿಯೋಗದ ಭೇಟಿ: ಯೋಜನೆಯ ವಿವರ
ಈ ಕುರಿತು ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ನಿಯೋಗದೊಂದಿಗೆ ಭೇಟಿ ಮಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು, ಭಾರತಮಾಲಾ ಪರಿಯೋಜನೆ–ಹಂತ 2ರ ಅಡಿಯಲ್ಲಿ ಪ್ರಸ್ತಾವಿತವಾಗಿರುವ ಈ ಎಕ್ಸ್‌ಪ್ರೆಸ್‌ವೇ ಒಟ್ಟು 702.43 ಕಿಲೋಮೀಟರ್ ಉದ್ದವಿದ್ದು, ಅದರ ಪೈಕಿ 496.32 ಕಿಲೋಮೀಟರ್ ಕರ್ನಾಟಕದಲ್ಲಿ ಹಾದು ಹೋಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ವಾಹನ ಸಂಚಾರದ ಒತ್ತಡ ನಿರಂತರವಾಗಿ ಹೆಚ್ಚುತ್ತಿದ್ದು, ಭವಿಷ್ಯದ ಸಾರಿಗೆ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಗ್ರೀನ್‌ಫೀಲ್ಡ್ ಮಾರ್ಗ ಅತ್ಯಗತ್ಯವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆರ್ಥಿಕ, ಕೈಗಾರಿಕಾ ಮತ್ತು ಪ್ರವಾಸೋದ್ಯಮ ಲಾಭಗಳು
ಈ ಯೋಜನೆಯಿಂದ ಉತ್ತರ ಕರ್ನಾಟಕದ ಕೈಗಾರಿಕೆಗಳು, ಕೃಷಿ ಉತ್ಪನ್ನಗಳ ಸಾಗಣೆ, ಲಾಜಿಸ್ಟಿಕ್ಸ್ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದ್ದು, ಮುಂಬೈ ಹಾಗೂ ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಿಗೆ ವೇಗದ ಸಂಪರ್ಕ ಕಲ್ಪಿಸುವ ಮೂಲಕ ಸಾರಿಗೆ ವೆಚ್ಚ ಮತ್ತು ಸಮಯ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.
ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಹಂಪಿ ಸೇರಿದಂತೆ ಹಲವು ಐತಿಹಾಸಿಕ ಪ್ರವಾಸಿ ತಾಣಗಳಿಗೆ ಸುಲಭ ಸಂಪರ್ಕ ದೊರೆಯುವುದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಜೊತೆಗೆ ಉದ್ಯೋಗ ಸೃಷ್ಟಿ, ಹೂಡಿಕೆ ಹೆಚ್ಚಳ ಹಾಗೂ ಉತ್ತರ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಯೋಜನೆ ಪೂರಕವಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯೋಜನೆ ಸ್ಥಿತಿ ಮತ್ತು ಅನುಮೋದನೆಗೆ ಮನವಿ
ಯೋಜನೆಯ ಕರಡು ವಿವರವಾದ ಯೋಜನಾ ವರದಿ (DPR) ಸಿದ್ಧಗೊಂಡಿದ್ದು, ಪರಿಸರ ಅನುಮೋದನೆಗೆ ಸಂಬಂಧಿಸಿದ ಟರ್ಮ್ಸ್ ಆಫ್ ರೆಫರೆನ್ಸ್ (TOR) ಕೂಡ ಅನುಮೋದನೆ ಪಡೆದಿದೆ. ಆದರೆ ಯೋಜನೆಗೆ ಅಗತ್ಯ ಆದ್ಯತೆ ದೊರೆಯದಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಆತಂಕಕಾರಿ ಎಂದು ತಿಳಿಸಿದ್ದಾರೆ.
ಹೀಗಾಗಿ, ಸಚಿವಾಲಯದ Alignment Approval Committee (AAC) ಮೂಲಕ ಅಂತಿಮ ಮಾರ್ಗಕ್ಕೆ ಶೀಘ್ರ ಅನುಮೋದನೆ ನೀಡಿ, BOT/HAM ಮಾದರಿಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಆದ್ಯತೆಯ ಮೇರೆಗೆ ಆರಂಭಿಸಲು ಅಗತ್ಯ ನಿರ್ದೇಶನ ನೀಡುವಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.
ಈ ಯೋಜನೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಜೀವನಾಡಿಯಾಗಲಿದ್ದು, ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

