ಶ್ರೀನಗರ-ದಕ್ಷಿಣ ಕಾಶ್ಮೀರದ ಸೂಕ್ಷ್ಮ ಪ್ರದೇಶವಾದ ಅನಂತ್‍ನಾಗ್ ಜಿಲ್ಲೆಯಲ್ಲಿ ಶಂಕಿತ ಭಯೋತ್ಪಾದಕರು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೆÇಲೀಸ್ ಇಲಾಖೆಯ ಹೆಡ್ ಕಾನ್‍ಸ್ಟೆಬಲ್ ಒಬ್ಬರು ವೀರಮರಣ ಅಪ್ಪಿದ್ದಾರೆ.
ವೀರಮರಣ ಹೊಂದಿದ ಹೆಡ್ ಕಾನ್‍ಸ್ಟೆಬಲ್ ಅವರನ್ನು ಬುಡ್ಗಾಮ್ ಜಿಲ್ಲೆಯ ಬೀರ್ವಾ ನಿವಾಸಿ ಆಶಿಕ್ ಹುಸೇನ್ ಎಂದು ಗುರುತಿಸಲಾಗಿದೆ.ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಹೆಡ್ ಕಾನ್‍ಸ್ಟೆಬಲ್ ಅವರನ್ನು ತಕ್ಷಣವೇ ಹತ್ತಿರದ ಅನಂತ್‍ನಾಗ್ ಸರ್ಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಇಡೀ ಕಣಿವೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಭದ್ರತೆ ಹಾಗೂ ತೀವ್ರ ನಿಗಾ ವಹಿಸಿರುವ ಬೆನ್ನಲ್ಲೇ ಈ ಘಟನೆ ನಡೆದಿರುವುದು ಭದ್ರತಾ ಸಂಸ್ಥೆಗಳಲ್ಲಿ ತೀವ್ರ ಕಳವಳ ಮೂಡಿಸಿದೆ.ಬುಧವಾರ ಮಧ್ಯಾಹ್ನ ಸುಮಾರು 12:30 ರ ವೇಳೆಗೆ ಅನಂತ್‍ನಾಗ್ ಪಟ್ಟಣದ ಜನನಿಬಿಡ ಪ್ರದೇಶವಾದ ಲಾಲ್ ಚೌಕ್‍ನಲ್ಲಿ ಕರ್ತವ್ಯದಲ್ಲಿದ್ದ ಪೆÇಲೀಸ್ ಪಡೆಯ ಮೇಲೆ ಶಂಕಿತ ಭಯೋತ್ಪಾದಕರು ದಿಢೀರ್ ಗುಂಡಿನ ದಾಳಿ ನಡೆಸಿದರು.
ಶೋಧ ಕಾರ್ಯಾಚರಣೆ ಚುರುಕು
ದಾಳಿ ನಡೆದ ತಕ್ಷಣವೇ ಎಚ್ಚೆತ್ತುಕೊಂಡ ಭದ್ರತಾ ಪಡೆಗಳು ಇಡೀ ಲಾಲ್ ಚೌಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ. ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇಡೀ ಅನಂತ್‍ನಾಗ್ ನಗರವನ್ನು ಸಶಸ್ತ್ರ ಪಡೆಗಳು ಸುತ್ತುವರೆದಿವೆ.ದಾಳಿ ನಡೆಸಿ ಪರಾರಿಯಾಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಸೇನೆ, ಸಿಆರ್‍ಪಿಎಫ್ ಮತ್ತು ಸ್ಥಳೀಯ ಪೆÇಲೀಸರು ಜಂಟಿಯಾಗಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಹೆಚ್ಚಿದ ಆತಂಕ
ಯಾತ್ರೆ ಭದ್ರತೆಗೆ ಹೊಸ ಸವಾಲು
ವಾರ್ಷಿಕ ಅಮರನಾಥ ಯಾತ್ರೆಯು ಪ್ರಸ್ತುತ ಚಾಲ್ತಿಯಲ್ಲಿದ್ದು, ಸಾವಿರಾರು ಯಾತ್ರಿಕರ ಸುರಕ್ಷತೆಗಾಗಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಬಹುಹಂತದ ‘ಸೆಕ್ಯುರಿಟಿ ಗ್ರಿಡ್’ ಜಾರಿಯಲ್ಲಿದೆ. ಇಂತಹ ಬಿಗಿ ಭದ್ರತೆಯ ನಡುವೆಯೂ ಭಯೋತ್ಪಾದಕರು ಈ ದಾಳಿ ನಡೆಸಿರುವುದು ಭದ್ರತಾ ಪಡೆಗಳಿಗೆ ಸವಾಲಾಗಿ ಪರಿಣಮಿಸಿದೆ.ಇತ್ತೀಚಿನ ದಿನಗಳಲ್ಲಿ ಭದ್ರತಾ ಸಂಸ್ಥೆಗಳು ತಂತ್ರಜ್ಞಾನ ಹಾಗೂ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಲಾಗಿದೆ.
ಈ ತಿಂಗಳ ಆರಂಭದಲ್ಲಷ್ಟೇ, ನುನ್ವಾನ್ ಬೇಸ್ ಕ್ಯಾಂಪ್‍ನಲ್ಲಿ ಅಳವಡಿಸಲಾಗಿದ್ದ ಮುಖ ಗುರುತಿಸುವಿಕೆ ವ್ಯವಸ್ಥೆ ತಂತ್ರಜ್ಞಾನದ ನೆರವಿನಿಂದ ಅನಂತ್‍ನಾಗ್ ಪೆÇಲೀಸರು ಶಂಕಿತ ಭಯೋತ್ಪಾದಕ ಭೂಗತ ಕೆಲಸಗಾರನನ್ನು ಯಶಸ್ವಿಯಾಗಿ ಬಂಧಿಸಿದ್ದರು. ಕಳೆದ ವಾರ ಜಮ್ಮು ರೈಲು ನಿಲ್ದಾಣದಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದಾಗ ಸರ್ಕಾರಿ ರೈಲ್ವೆ ಪೆÇಲೀಸರು ಎಂಟು ಜನರನ್ನು ಬಂಧಿಸಿದ್ದರು.
ಇದಕ್ಕೂ ಮುನ್ನ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ’ ಅಡಿಯಲ್ಲಿ 14 ಶಂಕಿತರ ವಿರುದ್ಧ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗಿತ್ತು.ಅಮರನಾಥ ಯಾತ್ರೆಯ ಮಾರ್ಗದಲ್ಲಿ ತಡೆಗಟ್ಟುವ ತಪಾಸಣೆಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದ್ದು, ಬುಧವಾರ ನಡೆದ ಈ ದಾಳಿಯ ಸಂಪೂರ್ಣ ಸತ್ಯಾಸತ್ಯತೆ ಹಾಗೂ ಇದರ ಹಿಂದೆ ಇರುವ ಉಗ್ರ ಸಂಘಟನೆಗಳ ಪತ್ತೆಗೆ ಉನ್ನತ ಮಟ್ಟದ ತನಿಖೆ ಜಾರಿಯಲ್ಲಿದೆ.

