ನವದೆಹಲಿ : 40ಕ್ಕೂ ಹೆಚ್ಚು ಸಿಆರ್‌ಪಿಎಫ್ (CRPF) ಯೋಧರ ಬಲಿದಾನಕ್ಕೆ ಕಾರಣವಾದ 2019ರ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬ, ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತ್ಯೆಗೀಡಾಗಿದ್ದಾನೆ.
2019ರ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬ, 40ಕ್ಕೂ ಹೆಚ್ಚು ಸಿಆರ್‌ಪಿಎಫ್ (CRPF) ಯೋಧರ ಬಲಿದಾನಕ್ಕೆ ಕಾರಣವಾಗಿದ್ದ ಉಗ್ರನನ್ನು ಪಾಕ್ ಆಕ್ರಮಿತ ಕಾಶ್ಮೀರದ (PoK) ಮುಜಫರಾಬಾದ್‌ನಲ್ಲಿ ಅಜ್ಞಾತ ಬಂದೂಕುಧಾರಿಗಳು ಹತ್ಯೆಗೈದಿದ್ದಾರೆ. ‘ಡಾಕ್ಟರ್’ ಎಂದು ಕರೆಯಲ್ಪಡುವ ಹಮ್ಜಾ ಬುರ್ಹಾನ್, ಮುಜಫರಾಬಾದ್‌ನಲ್ಲಿ ದಾಳಿಗೊಳಗಾದಾಗ ಹಲವು ಗುಂಡೇಟುಗಳನ್ನು ತಿಂದಿದ್ದನು. ಮೂಲತಃ ಪುಲ್ವಾಮಾದ ನಿವಾಸಿಯಾದ ಬುರ್ಹಾನ್‌ನ ಅಸಲಿ ಹೆಸರು ಅರ್ಜುಮಂದ್ ಗುಲ್ಜಾರ್ ದಾರ್. ಈತನನ್ನು 2022ರಲ್ಲಿ ಕೇಂದ್ರ ಗೃಹ ಸಚಿವಾಲಯವು ಭಯೋತ್ಪಾದಕ ಎಂದು ಘೋಷಿಸಿತ್ತು.
ಪುಲ್ವಾಮಾ ಭಯೋತ್ಪಾದಕ ದಾಳಿ
2019ರ ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‌ಪೋರಾದಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿ ಭಾರತದ ಇತಿಹಾಸದ ಅತ್ಯಂತ ಕರಾಳ ಮತ್ತು ನೋವಿನ ದಿನಗಳಲ್ಲಿ ಒಂದಾಗಿದೆ.
ಘಟನೆ ನಡೆದದ್ದು ಹೇಗೆ ?
ಫೆಬ್ರವರಿ 14, 2019 ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪುಲ್ವಾಮಾ ಜಿಲ್ಲೆಯ ಲೆಥ್‌ಪೋರಾ ಈ ಘಟನೆ ನಡೆದಿತ್ತು. ಸುಮಾರು 2,500ಕ್ಕೂ ಹೆಚ್ಚು ಸಿಆರ್‌ಪಿಎಫ್ (CRPF) ಯೋಧರನ್ನು ಹೊತ್ತಿದ್ದ 78 ವಾಹನಗಳ ಬೆಂಗಾವಲು ಪಡೆ (Convoy) ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿತ್ತು. ಆ ಸಮಯದಲ್ಲಿ, ಸ್ಫೋಟಕಗಳಿಂದ ತುಂಬಿದ ಕಾರನ್ನು ಓಡಿಸಿಕೊಂಡು ಬಂದ ಆದಿಲ್ ಅಹ್ಮದ್ ದಾರ್ ಎಂಬ ಆತ್ಮಹತ್ಯಾ ದಾಳಿಕೋರ, ಯೋಧರಿದ್ದ ಬಸ್‌ಗೆ ಬಲವಾಗಿ ಡಿಕ್ಕಿ ಹೊಡೆಸಿದನು. ಈ ಭೀಕರ ಸ್ಫೋಟದಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಯಿತು ಮತ್ತು ಹಲವಾರು ಕಿಲೋಮೀಟರ್‌ಗಳವರೆಗೆ ಅದರ ಸದ್ದು ಕೇಳಿಬಂದಿತ್ತು.

