ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 30 ಸದಸ್ಯ ಬಲದ ವಿಧಾನಸಭೆ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳ ತಯಾರಿ ಆರಂಭವಾಗಿದೆ.
ಹಿರಿಯ ನಟ ಕಮಲ್ ಹಾಸನ್ ತಮ್ಮ ರಾಜಕೀಯ ಪಕ್ಷವಾದ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಮೂಲಕ ಪುದುಚೇರಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಅವರ ಪಕ್ಷಕ್ಕೆ ಚಿಹ್ನೆಯನ್ನು ನೀಡಿದೆ.
ಚುನಾವಣಾ ಆಯೋಗ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆಯನ್ನು ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ. ಕಮಲ್ ಹಾಸನ್ ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ.
ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ? ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಅವರ ಪಕ್ಷವಾದ ಮಕ್ಕಳ್ ನೀಧಿ ಮೈಯಂ ಅಭ್ಯರ್ಥಿಗಳು ಮುಂಬರುವ ಪುದುಚೇರಿ ಚುನಾವಣೆಯಲ್ಲಿ ಸ್ಪರ್ಧಿಸಲು ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.
ಚುನಾವಣಾ ಆಯೋಗವು 2026ರ ಪುದುಚೇರಿ ವಿಧಾನಸಭಾ ಚುನಾವಣೆಗೆ ಟಾರ್ಚ್ ಲೈಟ್ ಚಿಹ್ನೆಯನ್ನು ಅಧಿಕೃತವಾಗಿ ಪಕ್ಷಕ್ಕೆ ನೀಡಿದೆ ಎಂದು ಮಕ್ಕಳ ನೀಧಿ ಮೈಯಂ ಪಕ್ಷದ ಮಾಧ್ಯಮ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
“2026ರ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಕ್ಕಳ ನೀಧಿ ಮೈಯಂ ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆಯನ್ನು ಹಂಚಿಕೆ ಮಾಡಿ ಭಾರತೀಯ ಚುನಾವಣಾ ಆಯೋಗವು ಅಧಿಸೂಚನೆಯನ್ನು ಹೊರಡಿಸಿದೆ” ಎಂದು ಪಕ್ಷದ ಮಾಧ್ಯಮ ವಿಭಾಗ ಹೇಳಿದೆ.
ಚುನಾವಣಾ ತಯಾರಿ ಆರಂಭ: ಈಗಾಗಲೇ ಮಕ್ಕಳ್ ನೀಧಿ ಮೈಯಂ ಪಕ್ಷ ಮುಂಬರುವ ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗೆ ತನ್ನ ಸಿದ್ಧತೆಗಳನ್ನು ಪ್ರಾರಂಭಿಸಿದೆ.
ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷವು ಹಲವು ನಿರ್ಣಯಗಳನ್ನು ಅಂಗೀಕರಿಸಿದೆ. ಇದರಲ್ಲಿ ಚುನಾವಣಾ ವಾರ್ ರೂಂ ಸ್ಥಾಪಿಸುವುದು ಮತ್ತು ಒಕ್ಕೂಟ ವ್ಯವಸ್ಥೆ, ಗ್ರಾಮೀಣ ಉದ್ಯೋಗ ಸುಧಾರಣೆ ಹಾಗೂ ಅಸ್ಮಿತೆಯ ರಾಜಕಾರಣದಂತಹ ಪ್ರಮುಖ ನೀತಿ ವಿಷಯಗಳ ಕುರಿತು ಚರ್ಚಿಸುವುದು ಸೇರಿವೆ.
ಮಕ್ಕಳ್ ನೀಧಿ ಮೈಯಂ ಕಾರ್ಯಕಾರಿ ಸಮಿತಿ 2026ರ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಮೂಲಕ ಸ್ಪರ್ಧಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕು ಎಂದು ಈಗಾಗಲೇ ಘೋಷಣೆ ಮಾಡಿದೆ. ಸಂಭವನೀಯ ಅಭ್ಯರ್ಥಿಗಳು ಟಿಕೆಟ್ ಪಡೆಯಲು ನಾಮನಿರ್ದೇಶನ ಶುಲ್ಕ 50,000 ರೂಪಾಯಿ ನಿಗದಿಪಡಿಸಲಾಗಿದೆ.
ಖ್ಯಾತ ಬಹುಭಾಷಾ ನಟ ಕಮಲ್ ಹಾಸನ್ ಫೆಬ್ರವರಿ 21, 2018ರಂದು ಮಧುರೈನಲ್ಲಿ ಮಕ್ಕಳ್ ನೀಧಿ ಮೈಯಂ ಪಕ್ಷವನ್ನು ಸ್ಥಾಪಿಸಿದರು. ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ಹೋರಾಡುವ ಪ್ರಮುಖ ಕಾರ್ಯಸೂಚಿಯೊಂದಿಗೆ ಈ ಪಕ್ಷವು ಅಸ್ತಿತ್ವಕ್ಕೆ ಬಂದಿದೆ.
ಸದ್ಯ ಎಂಎನ್‌ಎಂ ಪಕ್ಷವು ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆ ನೇತೃತ್ವದ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿದೆ ಮತ್ತು ಕಮಲ್ ಹಾಸನ್ ಜುಲೈ 25, 2025ರಂದು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

