ಬೆಂಗಳೂರು: ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ಸರ್ಕಾರಿ ನೌಕರರಲ್ಲದವರನ್ನು ನೇಮಕ ಮಾಡಿಕೊಳ್ಳಲು ಕೇಂದ್ರ ನಗರ ಪಾಲಿಕೆ ಮುಂದಾಗಿದೆ.
ದ್ವಿತೀಯ ಪಿಯುಸಿ ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದವರನ್ನು ಗಣತಿದಾರರಾಗಿ ಆಯ್ಕೆ ಮಾಡಿಕೊಳ್ಳಲಿದ್ದು, ಏಪ್ರಿಲ್ 22 ರಂದು ಬೆಳಿಗ್ಗೆ 9 ಗಂಟೆಗೆ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ. ಅಂದಾಜು ಒಂದು ಸಾವಿರ ಜನರನ್ನು ಗಣತಿ ಕಾರ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಆಸಕ್ತರು ಕನಿಷ್ಠ ಆಂಡ್ರಾಯ್ಡ್ 12, 4 ಜಿಬಿ ರ್ಯಾಮ್ ಮೊಬೈಲ್ ಹೊಂದಿರಬೇಕು. ಸಿವಿ ರಾಮನ್ ನಗರ, ಶಾಂತಿನಗರ, ಶಿವಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ ನಿವಾಸಿಗಳಿಗೆ ಆದ್ಯತೆ ನೀಡಲಾಗುವುದು. ಮೊದಲ ಹಂತದ ಗಣತಿಗೆ ಕನಿಷ್ಠ 150 ರಿಂದ 200 ಮನೆಗಳಿಗೆ 9 ಸಾವಿರ ರೂ., ಎರಡನೇ ಹಂತದ ಗಣತಿ ಕಾರ್ಯಕ್ಕೆ 16000 ರೂ. ಗೌರವಧನ ನೀಡಲಾಗುವುದು.
ಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ನೌಕರರು ಗೈರಾಗಿದ್ದು ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ. ಗಣತಿ ಕಾರ್ಯ ಮುಂದುವರೆಸಲು ಸರ್ಕಾರಿ ನೌಕರರಲ್ಲದ ಖಾಸಗಿ ಗಣತಿದಾರರ ನೇಮಕ ಮಾಡಿಕೊಳ್ಳಲು ಪಾಲಿಕೆ ಮುಂದಾಗಿದೆ.

