ಚಿಕ್ಕೋಡಿ (ಬೆಳಗಾವಿ): ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಯ ಸಂಭ್ರಮ. ಲಕ್ಷಾಂತರ ವಿದ್ಯಾರ್ಥಿಗಳು ಭವಿಷ್ಯದ ಕನಸು ಹೊತ್ತು ಪರೀಕ್ಷಾ ಕೇಂದ್ರದತ್ತ ಹೊರಟಿದ್ದರೆ, ಇತ್ತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಮಾತ್ರ ವಿಧಿಯಾಟಕ್ಕೆ ಒಂದು ಜೀವ ಬಲಿಯಾಗಿದೆ. ಪರೀಕ್ಷೆಗೆ ಎಲ್ಲಾ ತಯಾರಿ ನಡೆಸಿದ್ದ ವಿದ್ಯಾರ್ಥಿನಿ ಭೂಮಿಕಾ ಮಾಳಂಗಿ (17), ಪರೀಕ್ಷಾ ಕೇಂದ್ರ ತಲುಪುವ ಮೊದಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
ಭೂಮಿಕಾ ಅತ್ಯಂತ ಚುರುಕಾಗಿದ್ದ ವಿದ್ಯಾರ್ಥಿನಿ. ಇಂದು ಫೆಬ್ರವರಿ 28, ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ. ಬೆಳಗ್ಗೆಯಿಂದಲೇ ಪರೀಕ್ಷೆಯ ಉತ್ಸಾಹದಲ್ಲಿದ್ದ ಭೂಮಿಕಾ, ಸ್ನಾನ ಮುಗಿಸಿ ದೇವರಿಗೆ ನಮಸ್ಕರಿಸಿ ಪರೀಕ್ಷೆಗೆ ಹೊರಡಲು ಸಿದ್ಧರಾಗಿದ್ದರು. ಆದರೆ, ಮನೆಯಿಂದ ಹೊರಬರುತ್ತಿದ್ದಂತೆಯೇ ದಿಢೀರನೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.
ಪೋಷಕರು ಗಾಬರಿಯಿಂದ ಆಕೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ದುರಾದೃಷ್ಟ ಎಂಬಂತೆ ಆಕೆ ಮಾರ್ಗಮಧ್ಯೆಯೇ ಅಸುನೀಗಿದ್ದಾಳೆ. ಪರೀಕ್ಷಾ ಹಾಲ್‌ನಲ್ಲಿ ಕುಳಿತು ಪೆನ್ನು ಹಿಡಿಯಬೇಕಿದ್ದ ಕೈಗಳು ಈಗ ಚಿರನಿದ್ರೆಗೆ ಜಾರಿವೆ. ಮಗಳ ಬಗ್ಗೆ ನೂರಾರು ಕನಸು ಕಂಡಿದ್ದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಘಟನೆ ನಡೆದ ಬಂಬಲವಾಡ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಡೀ ಗ್ರಾಮವೇ ಈ ಪ್ರತಿಭಾವಂತ ವಿದ್ಯಾರ್ಥಿನಿಯ ಸಾವಿಗೆ ಕಣ್ಣೀರಿಡುತ್ತಿದೆ. ಸಹಪಾಠಿಗಳು ಮತ್ತು ಶಿಕ್ಷಕರು ಭೂಮಿಕಾಳ ಗುಣ ಮತ್ತು ಆಕೆಯ ಓದಿನ ಆಸಕ್ತಿಯನ್ನು ನೆನೆದು ಮರುಗುತ್ತಿದ್ದಾರೆ.

