ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮತ್ತು ಅದಕ್ಕೆ ಕೊಲೆ ಬೆದರಿಕೆ ಕಮೆಂಟ್ ಮಾಡಿದವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನರ್ಲಪದವು ಬಳಿ ಇತ್ತೀಚೆಗೆ ದನದ ಮಾಂಸ ಅಕ್ರಮವಾಗಿ ಸಾಗಿಸುತ್ತಿದ್ದವನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಲಾಗಿದೆ.
ಇಬ್ಬರು ಯುವಕರ ಫೋಟೋ ಹಾಕಿ ಸಮುದಾಯವನ್ನು ಪ್ರಚೋದಿಸುವಂತೆ ಉದ್ದೇಶಪೂರ್ವಕವಾಗಿ ಪೋಸ್ಟ್ ಹಾಕಲಾಗಿದೆ. ಈ ಪೋಸ್ಟ್ ಗೆ ಕೊಲೆ ಬೆದರಿಕೆಯಂತಹ ಕಮೆಂಟ್ ಮಾಡಲಾಗಿದೆ. ಇದನ್ನು ಗಮನಿಸಿದ ಬಜ್ಪೆ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ಕೈಗೊಂಡಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

