ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಆರೋಗ್ಯ ಮತ್ತು ವೌದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಮಾರ್ಚ್ 11 ರಿಂದ ಮುಷ್ಕರ ಆರಂಭಿಸಲಿದೆ.
ಹಲವು ವರ್ಷಗಳಿಂದ ನಮ್ಮ ಬೇಡಿಕೆಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಮುಷ್ಕರ ಅನಿವಾರ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶ ಮಾಡಬೇಕು. ಬೇಡಿಕೆ ಈಡೇರಿಸುವತ್ತ ಗಮನಹರಿಸಬೇಕು ಎಂದು ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರವೀಂದ್ರನಾಥ್ ಮೇಟಿ ತಿಳಿಸಿದ್ದಾರೆ.
ಔಷಧ ಸರಬರಾಜು, ವೈದ್ಯರು, ಬಡ್ತಿ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 11 ರಿಂದ 15ರವರೆಗೆ ಎಲ್ಲಾ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಪ್ಪುಪಟ್ಟಿ ಧರಿಸಿ ಮುಷ್ಕರ ನಡೆಸಲಾಗುವುದು.
ಈ ವೇಳೆ ಹೊರರೋಗಿಗಳಿಗೆ ಚಿಕಿತ್ಸೆ ಸ್ಥಗಿತಗೊಳಿಸಲಾಗುವುದು. ತುರ್ತು ಸೇವೆಗಳನ್ನು ಮಾಅತ್ರ ನಿರ್ವಹಿಸುವುದಾಗಿ ತಿಳಿಸಿದ್ದಾರೆ. ಮುಷ್ಕರದ ಬಳಿಕವೂ ಸರ್ಕಾರದ ನಿಲುವಿನಲ್ಲಿ ಬದಲಾವಣೆ ಕಾಣದಿದ್ದರೆ ಮಾರ್ಚ್ 16ರಂದು ಗೈರಾಗುವ ಮೂಲಕ ಮುಷ್ಕರ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

