ಬೆಂಗಳೂರು: ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರನ್ನು ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾಗಿ (ಪ್ರೊ-ಟೆಮ್ ಸ್ಪೀಕರ್) ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ನೇಮಕ ಮಾಡಿದ್ದಾರೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದ
ಭಾರತ ಸಂವಿಧಾನದ ಅನುಚ್ಛೇದ 180(1)ರ ಅಡಿಯಲ್ಲಿ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ಚಲಾಯಿಸಿ ಈ ನೇಮಕ ಮಾಡಲಾಗಿದೆ. ವಿಧಾನಸಭೆಯ ನೂತನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಟಿ.ಬಿ. ಜಯಚಂದ್ರ ಅವರು ಹಂಗಾಮಿ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಅವಧಿಯಲ್ಲಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧನೆ, ಸಭಾಧ್ಯಕ್ಷರ ಚುನಾವಣೆಯ ಪ್ರಕ್ರಿಯೆ ನಡೆಸುವುದು ಸೇರಿದಂತೆ ಸಭಾಧ್ಯಕ್ಷರ ಅಧಿಕಾರ ವ್ಯಾಪ್ತಿಯ ಅಗತ್ಯ ಸಂಸದೀಯ ಕಾರ್ಯಗಳನ್ನು ಅವರು ನಿರ್ವಹಿಸಲಿದ್ದಾರೆ.
ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಜಿ. ಶ್ರೀಧರ್ ಅವರು ವಿಶೇಷ ರಾಜ್ಯಪತ್ರ (ಗೆಜೆಟ್) ಮೂಲಕ ಪ್ರಕಟಿಸಿದ್ದಾರೆ.
ವಿಧಾನಸಭೆಯಲ್ಲಿ ಶೀಘ್ರದಲ್ಲೇ ನೂತನ ಸಭಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಅಲ್ಲಿಯವರೆಗೆ ಸದನದ ಕಾರ್ಯಚಟುವಟಿಕೆಗಳನ್ನು ಸುಗಮವಾಗಿ ನಡೆಸುವ ಹೊಣೆಗಾರಿಕೆಯನ್ನು ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರು ವಹಿಸಿಕೊಳ್ಳಲಿದ್ದಾರೆ.

