ಚಿತ್ರದುರ್ಗ: ಚಿತ್ರದುರ್ಗದ ಬಳಿ ಖಾಸಗಿ ಬಸ್ ನಲ್ಲಿ ಬೆಂಕಿ ದುರಂತ ಸಂಭವಿಸಿದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆಯಂತೆ ಕರ್ನಾಟಕ ಸಾರಿಗೆ ಇಲಾಖೆ ಖಾಸಗಿ ಬಸ್‌ಗಳಿಗೆ ಹೊಸ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಿದೆ.
ಫೆಬ್ರವರಿ 28ರೊಳಗೆ ಸ್ಲೀಪರ್ ಕೋಚ್ ಮತ್ತು ಅಖಿಲ ಭಾರತ ಪ್ರವಾಸಿ ಬಸ್‌ಗಳಲ್ಲಿ ತುರ್ತು ನಿರ್ಗಮನ ದ್ವಾರ, ಅಗ್ನಿಶಾಮಕ ಸಾಧನ, ಹ್ಯಾಮರ್ ಸೇರಿದಂತೆ 11 ಕಡ್ಡಾಯ ಕ್ರಮಗಳನ್ನು ಅಳವಡಿಸಲು ಗಡುವು ನೀಡಲಾಗಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆಗಳ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಖಾಸಗಿ ಬಸ್ ಮಾಲೀಕರಿಗೆ ಖಡಕ್ ಸೂಚನೆ ನೀಡಿದೆ. ಎಲ್ಲಾ ಸ್ಲೀಪರ್ ಕೋಚ್ ಮತ್ತು ಅಖಿಲ ಭಾರತ ಪ್ರವಾಸಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ಸೂಚಿಸಿದೆ.
ಫೆಬ್ರವರಿ 28ರೊಳಗೆ ಸುರಕ್ಷಿತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿರುವಂತೆ ನಿರ್ದೇಶಿಸಲಾಗಿದೆ. ಚಿತ್ರದುರ್ಗದ ಬಳಿ ಖಾಸಗಿ ಬಸ್ ನಲ್ಲಿ ಅಗ್ನಿದುರಂತದ ಬಳಿಕ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕಳೆದ ತಿಂಗಳ 21ರಂದು ಖಾಸಗಿ ಬಸ್ ಮಾಲೀಕರು, ಕೋಚ್ ನಿರ್ಮಾಣ ಕಂಪನಿಗಳ ಪ್ರತಿನಿಧಿಗಳು ಹಾಗೂ ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
ಸಭೆಯಲ್ಲಿ ಬಸ್ ಬಾಡಿ ನಿರ್ಮಾಣ ವಿಧಾನ, ತುರ್ತು ನಿರ್ಗಮನ ದ್ವಾರಗಳ ಸಂಖ್ಯೆ, ಅಗ್ನಿಶಾಮಕ ಸಾಧನಗಳ ಅಳವಡಿಕೆ, ಎಮರ್ಜೆನ್ಸಿ ಎಕ್ಸಿಟ್ ಬಳಿ ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ 11 ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ.
ಎಸಿ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ನಂದಿಸುವ ವಿಧಾನಗಳ ಬಗ್ಗೆ ಸೂಚನೆ ನೀಡಬೇಕು, ಗ್ಲಾಸ್ ಒಡೆದು ಹೊರಬರಲು ಹ್ಯಾಮರ್‌ಗಳನ್ನು ಇರಿಸಬೇಕು, ಪ್ರಯಾಣಿಕರಿಗೆ ಎಚ್ಚರಿಕೆ ಅಲಾರಂ ವ್ಯವಸ್ಥೆ ಮಾಡಬೇಕು ಹಾಗೂ ಡೋರ್ ಜಂಪ್ ಮಾಡಲು ಮೆಟ್ಟಿಲುಗಳ ಸೌಲಭ್ಯ ಒದಗಿಸಬೇಕು ಎಂದು ಸಚಿವರು ಖಾಸಗಿ ಬಸ್ ಮಾಲೀಕರಿಗೆ ಮತ್ತು ಬಸ್ ಬಾಡಿ ಬಿಲ್ಡಿಂಗ್ ಮಾಡುವ ಕಂಪನಿಗಳಿಗೆ ವಾರ್ನಿಂಗ್ ನೀಡಿದ್ದಾರೆ.
ಕಡ್ಡಾಯ ಜಾರಿಗೆ ರೂಪಿಸಿರುವ ನಿಯಮಗಳು:
ಸ್ಲೀಪರ್ ಬಸ್ ಗಳಲ್ಲಿ ಚಾಲಕರ ಹಿಂಬದಿ ಡೋರ್ ತೆಗೆಯಬೇಕು.
ಸ್ಲೀಪರ್ ಬಸ್ ಗಳಲ್ಲಿ ತುರ್ತು ಸ್ಲೈಡರ್ ತೆಗೆಯಬೇಕು.
ಫೈರ್ ಡಿಟೆಕ್ಷನ್ ತಿಂಗಳೊಳಗೆ ಅಳವಡಿಸಬೇಕು.
10ಕೆಜಿ ತೂಕದ ಅಗ್ನಿ ಶಾಮಕ ಸಾಧನ ಅಳವಡಿಕೆ ಕಡ್ಡಾಯ.
ಚಾಸಿಸ್ ಅನಧಿಕೃತ ವಿಸ್ತರಣೆಗೆ ಬ್ರೇಕ್.
ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣ ಪತ್ರ ಕಡ್ಡಾಯ.
ಪ್ರಯಾಣಿಕರ ಸೇಫ್ಟಿ ಮಾನದಂಡ ಇದ್ದರೆ ಮಾತ್ರ ಎಫ್ ಸಿ ಮಾಡಬೇಕು.
ಬಸ್ ಕವಚ ನಿರ್ಮಾಣ ಸಂಸ್ಥೆ ಸಿಂಧುತ್ವ ಪರಿಶೀಲಿಸಿದ ನಂತರವೇ ನೋಂದಣಿ ಮಾಡಬೇಕು.
ಪ್ರತಿ ಬಸ್ಸಿನಲ್ಲೂ ಚಾವಣಿಯ ಹ್ಯಾಚ್ಗಳೊಂದಿಗೆ ರೇಖಾಚಿತ್ರವನ್ನು ಪ್ರಯಾಣಿಕರಿಗೆ ಓದಲು ಅನುಕೂಲವಾಗುವಂತೆ ಪ್ರದರ್ಶನ.
12 ಮೀಟರ್ ಉದ್ದದ ಬಸ್ಸಿನಲ್ಲಿ ಕನಿಷ್ಠ 4 ತುರ್ತು ನಿರ್ಗಮನ ದ್ವಾರವಿರಬೇಕು, 12 ಮೀಟರಗಿಂತ ಹೆಚ್ಚಿದ್ದರೆ ಕನಿಷ್ಠ 5 ಡೋರ್ ಗಳಿರಬೇಕು.

