ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಮರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಕೊಲೆ ಪ್ರಕರಣವನ್ನು ಬೇಧಿಸಿರುವ ಮಂಡ್ಯ ಪೊಲೀಸರು ಮೃತನ ಪತ್ನಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅರ್ಚಕ ಸಿದ್ದಲಿಂಗಪ್ಪನ ಪತ್ನಿ ಶಾಲಿನಿ(32), ಆಕೆಯ ಪ್ರಿಯಕರ ಟಿಪ್ಪರ್ ಚಾಲಕ ಎಂ.ಸಿ. ಹರೀಶ್(33), ಆತನ ಸ್ನೇಹಿತರಾದ ಎಂ,ಆರ್, ಸಂತೋಷ್ ಕುಮಾರ್(29), ಬಿ.ಆರ್. ಗಣೇಶ್(29) ಬಂಧಿತ ಆರೋಪಿಗಳು.
ಹರೀಶ್ ನನ್ನು ಮಾರ್ಚ್ 9 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದ್ದು, ಆತ ನೀಡಿದ ಮಾಹಿತಿ ಆಧರಿಸಿ ಉಳಿದ ಮೂವರನ್ನು ಬಂಧಿಸಲಾಗಿದೆ.
ಮಾರ್ಚ್ 6ರಂದು ಕೆ. ಶೆಟ್ಟಿಹಳ್ಳಿಯ ಗಣಪತಿ ದೇವಾಲಯಕ್ಕೆ ಪೂಜೆಗೆ ಹೋಗಿದ್ದ ಅರ್ಚಕ ಸಿದ್ದಲಿಂಗಪ್ಪ ವಾಪಸ್ ಬಂದಿರಲಿಲ್ಲ. ಮಧ್ಯರಾತ್ರಿ ಹುಡುಕಾಟ ನಡೆಸಿದಾಗ ಸಿಡಿಎಸ್ ಕಾಲುವೆಯ ತೂಬಿನ ಹತ್ತಿರ ಚಪ್ಪಲಿ, ಪಕ್ಕದ ಹುಲ್ಲಿನ ಮೇಲೆ ರಕ್ತ ಚೆಲ್ಲಿರುವುದು ಕಂಡುಬಂದಿತ್ತು. ಅದರ ಪಕ್ಕದಲ್ಲಿ ಅವರು ಧರಿಸುತ್ತಿದ್ದ ರುದ್ರಾಕ್ಷಿ ಸರ ಕಂಡುಬಂದಿದ್ದು, ಅರ್ಚಕನ ಬೈಕ್ ಕಾಲುವೆಯಲ್ಲಿ ಬಿದ್ದಿತ್ತು.
ಮಾರ್ಚ್ 7ರಂದು ಬೆಳಿಗ್ಗೆ ಗ್ರಾಮದ ಸಿಡಿಎಸ್ ಶಾಲೆಯ ತೂಬಿನಲ್ಲಿ ಸಿದ್ದಲಿಂಗಪ್ಪ ಶವ ಸಿಲುಕಿಕೊಂಡಿರುವುದು ಕಂಡು ಬಂದಿದ್ದು, ಮುಖ, ತಲೆಗೆ ಗಾಯಗಳಾಗಿದ್ದು, ಯಾರೋ ಅಪರಿಚಿತರು ಹೊಡೆದು ಕೊಲೆ ಮಾಡಿರುವ ಬಗ್ಗೆ ಮೃತನ ಸಹೋದರ ಬಾಲಸುಂದರ್ ದೂರು ನೀಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಸಿದ್ದಲಿಂಗಪ್ಪ ತನ್ನ ಸ್ವಂತ ಅಕ್ಕನ ಮಗಳನ್ನು ಮದುವೆ ಮಾಡಿಕೊಂಡಿದ್ದು, ಇಬ್ಬರು ಮಕ್ಕಳಿದ್ದಾರೆ. ಶಾಲಿನಿ ಟಿಪ್ಪರ್ ಚಾಲಕ ಹರೀಶ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಇಬ್ಬರೂ ಒಟ್ಟಿಗೆ ಇದ್ದಾಗ ಸಿದ್ದಲಿಂಗಪ್ಪನ ಕೈಗೆ ಸಿಕ್ಕಿದ್ದರು. ಗಂಡನನ್ನು ಮುಗಿಸಲು ಹರೀಶನಿಗೆ ಶಾಲಿನಿ ಹೇಳಿದ್ದಳು. ಮಾರ್ಚ್ 6ರಂದು ಅರ್ಚಕ ಸಿದ್ಧಲಿಂಗಪ್ಪ ಪೂಜೆ ಮುಗಿಸಿ ದೇವಾಲಯದಿಂದ ಬೈಕ್ ನಲ್ಲಿ ಬರುವಾಗ ನಿರ್ಜನ ಪ್ರದೇಶದಲ್ಲಿ ಸಿದ್ದಲಿಂಗಪ್ಪನನ್ನು ಅಡ್ಡಗಟ್ಟಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಅಪಘಾತವಾಗಿ ಬಿದ್ದಿರಬಹುದು ಎಂದು ಬಿಂಬಿಸಲು ಬೈಕ್ ಅನ್ನು ನಾಲೆಗೆ ತಳ್ಳಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

