ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಬಜೆಟ್ 2026ರ ತಯಾರಿ ನಡೆಸುತ್ತಿದ್ದಾರೆ. ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ ಇಂದು ನಡೆಯುವ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೈರಾಗುತ್ತಿದ್ದಾರೆ.
ಮಂಗಳವಾರ ಮಧ್ಯಾಹ್ನ ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆ ನಿಗದಿಯಾಗಿದೆ. ಈ ಎರಡೂ ಖಾತೆಗಳಿಗೆ ಸಚಿವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.
ಆದರೆ ಡಿ.ಕೆ.ಶಿವಕುಮಾರ್ ಬೆಳಗ್ಗೆ ದೆಹಲಿಗೆ ತೆರಳಲಿದ್ದು, ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಸಭೆಗೆ ಗೈರಾಗಲಿದ್ದಾರೆ. ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಅನುಮತಿ ಪಡೆಯುವೆ: ಮಂಗಳವಾರದ ದೆಹಲಿ ಭೇಟಿ ಕುರಿತು ಡಿ.ಕೆ.ಶಿವಕುಮಾರ್ ಮಾತನಾಡಿ, “ಮುಖ್ಯಮಂತ್ರಿಗಳ ಅನುಮತಿ ಪಡೆದು ದೆಹಲಿಗೆ ತೆರಳುತ್ತಿದ್ದೇನೆ. ಅಧಿಕಾರಿಗಳು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಹೇಳಿದ್ದಾರೆ.
ಫೆಬ್ರವರಿ 4 ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿದಿನ ವಿವಿಧ ಇಲಾಖೆಗಳ ಜೊತೆ ಬಜೆಟ್ ಪೂರ್ವಭಾವಿ ಸಭೆಯನ್ನು ನಡೆಸುತ್ತಿದ್ದಾರೆ. ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ಇಲಾಖೆಗಳ 4-5 ಅಧಿಕಾರಿಗಳು ಈ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಆದರೆ ಇಂದು ನಡೆಯಲಿರುವ ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಖಾತೆಯ ಸಚಿವರಾದ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳುತ್ತಿಲ್ಲ. ಅಧಿಕಾರಿಗಳು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ.
ಬಜೆಟ್‌ನಲ್ಲಿ ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ ಎರಡು ಪ್ರಮುಖ ಇಲಾಖೆಗಳು. ಆದರೆ ಈ ಇಲಾಖೆಗಳ ಪೂರ್ವಭಾವಿ ಸಭೆಗೆ ಡಿ.ಕೆ.ಶಿವಕುಮಾರ್ ಗೈರಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಮಾಹಿತಿಗಳ ಪ್ರಕಾರ ಅಸ್ಸಾಂ ವಿಧಾನಸಭೆ ಚುನಾವಣೆ 2026ರ ಕುರಿತು ದೆಹಲಿಯಲ್ಲಿ ಸಭೆ ನಿಗದಿಯಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಂಸದೆ ಪ್ರಿಯಾಂಕಾ ವಾದ್ರಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಸ್ಸಾಂ ಚುನಾವಣೆ ವೀಕ್ಷಕರಾಗಿರುವ ಡಿ.ಕೆ.ಶಿವಕುಮಾರ್ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ದಿನಾಂಕ ಫಿಕ್ಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಬಜೆಟ್ 2026 ಮಂಡಿಸುವ ಮೂಲಕ 17ನೇ ಬಜೆಟ್ ಮಂಡಿಸಿ ರಾಜ್ಯ ರಾಜಕೀಯದಲ್ಲಿ ಇತಿಹಾಸ ನಿರ್ಮಾಣ ಮಾಡಲಿದ್ದಾರೆ.
ಮಾರ್ಚ್‌ನಲ್ಲಿ ಬಜೆಟ್ ಮಂಡಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಬಜೆಟ್ ಅಧಿವೇಶನದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಸೋಮವಾರ ಮಾತನಾಡಿದ್ದ ಸಿದ್ದರಾಮಯ್ಯ, “ಬಜೆಟ್ ಮಂಡನೆ ದಿನಾಂಕವನ್ನು ಅಂತಿಮಗೊಳಿಸಿ ಇನ್ನೂ ಎರಡು ದಿನದಲ್ಲಿ ಪ್ರಕಟಿಸಲಾಗುತ್ತದೆ” ಎಂದು ಹೇಳಿದ್ದರು. ಈಗಾಗಲೇ 16 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ 17ನೇ ಬಜೆಟ್‌ನಲ್ಲಿ ಯಾವ ಕೊಡುಗೆ ನೀಡಲಿದ್ದಾರೆ? ಎಂದು ಕಾದು ನೋಡಬೇಕಿದೆ.
ಬಜೆಟ್ ಮಂಡನೆ ಸಮಯದಲ್ಲಿಯೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರದ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಹೈಕಮಾಂಡ್‌ನಿಂದ ಹಸಿರು ನಿಶಾನೆ ಸಿಕ್ಕಿದೆ ಎಂದು ಹೇಳಿಕೆ ನೀಡಿದ್ದು, ಚರ್ಚೆಗೆ ಕಾರಣವಾಗಿದೆ.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಡಿ.ಕೆ.ಶಿವಕುಮಾರ್, “ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಹೇಳಿದಂತೆ ಕೇಳೋಣ ಬಿಡಿ” ಎಂದು ಖಡಕ್ ಆಗಿ ತಿರುಗೇಟು ನೀಡಿದ್ದರು. ರಾಜ್ಯದ ಯಾವ ನಾಯಕರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಪ್ರತಿಕ್ರಿಯೆ ಬರಬೇಕಿರುವುದು ದೆಹಲಿಯಿಂದ ಎಂದು ಹೇಳುವ ಮೂಲಕ ಎಲ್ಲಾದಕ್ಕೂ ಹೈಕಮಾಂಡ್ ನಾಯಕರು ಉತ್ತರ ಕೊಡಬೇಕು ಎಂದು ಅವರು ಪರೋಕ್ಷವಾಗಿ ಸೂಚನೆ ನೀಡಿದ್ದರು.
ಮಂಗಳವಾರದ ದೆಹಲಿ ಭೇಟಿಯ ವೇಳೆ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ರಾಜ್ಯ ರಾಜಕೀಯದ ಕುರಿತು ಚರ್ಚಿಸುವ ನಿರೀಕ್ಷೆ ಇದೆ. ಲೋಕಸಭೆ ಅಧಿವೇಶನ ನಡೆಯುತ್ತಿರುವ ಕಾರಣ ಎಲ್ಲಾ ನಾಯಕರು ದೆಹಲಿಯಲ್ಲಿಯೇ ಇದ್ದಾರೆ.

