ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಗಾಗಿ ರಾಜಕೀಯ ಪಕ್ಷಗಳ ನಾಯಕರು ಈಗಿನಿಂದಲೇ ಟಿಕೆಟ್ ಗಾಗಿ ತಮ್ಮ ತಮ್ಮ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಇತ್ತೀಚೆಗೆ ಹೇಳಿದ್ದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಈಗ ತಾನು ಟಿಕೆಟ್ ಆಕಾಂಕ್ಷಿಯಾಗಿರುವ ಕ್ಷೇತ್ರದ ಹೆಸರು ಘೋಷಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ವಿಧಾನಸಭಾ ಚುನಾವಣೆಗೆ ನಾನು ಮೈಸೂರಿನ ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ತಿಳಿಸಿದ್ದಾರೆ. ಅಭ್ಯರ್ಥಿಗೂ, ಆಕಾಂಕ್ಷಿಗೂ ವ್ಯತ್ಯಾಸವಿದೆ. ನಾನು ಟಿಕೆಟ್ ಆಕಾಂಕ್ಷಿ. ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.
ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನು. ಇಲ್ಲಿನ ಜನರು ವಿದ್ಯಾವಂತರು ಮಾತ್ರವಲ್ಲ ಪ್ರಜ್ಞಾವಂತರು ಕೂಡ ಹೌದು. ಚಾಮರಾಜ ಕ್ಷೇತ್ರವನ್ನು ವಿದ್ಯಾವಂತರ ಕ್ಷೇತ್ರ ಎನ್ನುತ್ತಾರೆ. ಸದಾ ಸಮಾಜದ ಬಗ್ಗೆ ಯೋಚನೆ ಮಾಡುವವರು ಇಲ್ಲಿದ್ದಾರೆ. ಇಲ್ಲಿ ಬಹಳಷ್ಟು ವಿದ್ಯಾಕೇಂದ್ರಗಳಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಾಕಷ್ಟು ಉದ್ದಿಮೆಗಳಿವೆ. ಅತಿಹೆಚ್ಚು ಶೈಕ್ಷಣಿಕ ಸಂಸ್ಥೆಗಳಿವೆ. ಹಾಗಾಗಿ ಇಲ್ಲಿನ ವಿದ್ಯಾವಂತರ, ಪ್ರಜ್ಞಾವಂತರ, ವಿಚಾರವಂತರ ಪ್ರತಿನಿಧಿ ಯಾರಾಗಬೇಕು ಎಂದು ಇಲ್ಲಿನ ಜನ ತೀರ್ಮಾನಿಸುತ್ತಾರೆ. ನನಗೂ ಆಶಿರ್ವಾದ ಮಾಡಿ ಎಂದು ಇಲ್ಲಿನ ಜನರನ್ನು ಕೇಳುತ್ತೇನೆ ಎಂದಿದ್ದಾರೆ.

