ಬೆಂಗಳೂರು: ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಪ್ರಕರಣದ ಬೆನ್ನಲ್ಲೇ ಜೈಲಾಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಮುಂದಾಗಿದ್ದರು. ಆದರೆ ಪ್ರಭಾವಿ ವ್ಯಕ್ತಿಯ ಕರೆಯಿಂದಾಗಿ ಮತ್ತೆ ಪರಪ್ಪನ ಅಗ್ರಹಾರಕ್ಕೆ ವಾಪಸ್ ಕರೆತರಲಾಗಿದೆ ಎಂದು ತಿಳಿದುಬಂದಿದೆ.
ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾಗ ಪ್ರಜ್ವಲ್ ರೇವಣ್ಣ ಬ್ಯಾರಕ್ ನಲ್ಲಿ ಮೊಬೈಲ್, ಪೆನ್ ಡ್ರೈವ್, ನೋಟ್ ಬುಕ್ ಗಳು ಪತ್ತೆಯಾಗಿದ್ದವು. ಅಲ್ಲದೇ ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿ ಮಾತನಾಡುತ್ತಾ ರಾಜಾರೋಷವಾಗಿ ಜೈಲಿನಲ್ಲಿರುವ ವಿಡಿಯೋಗಳು ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ವಿಶೇಷ ತಂಡ ಕೂಡ ರಚನೆಯಾಗಿತ್ತು. ತನಿಖೆ ನಡೆಸಿರುವ ಜೈಲಾಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ನಿರ್ಧರಿಸಿದ್ದರು.
ಜೈಲಾಧಿಕಾರಿಗಳು ಹಾಗೂ ಪೊಲೀಸರು ಪ್ರಜ್ವಲ್ ರೇವಣ್ಣ ಅವರನ್ನು ಬಿಗಿ ಭದ್ರತೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಬಿಗಿ ಭದ್ರತೆಯಲ್ಲಿ ಕರೆದೊಯ್ದಿದ್ದರು. ಸಿಎಆರ್ ಪೊಲೀಸರು ಬೆಂಗಳೂರಿನಿಂದ ಶಿರಾವರೆಗೆ ತಲುಪಿದ್ದರು. ಶಿರಾ ತಲುಪುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪ್ರಭಾವಿ ವ್ಯಕ್ತಿಯೊಬ್ಬರು ಕರೆ ಮಾಡಿದ್ದಾರೆ. ತಕ್ಷಣ ಪ್ರಜ್ವಲ್ ನನ್ನು ಬೆಂಗಳೂರಿಗೆ ವಾಪಸ್ ಕರೆ ತರುವಂತೆ ಸೂಚಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣನನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡುವುದು ಬೇಡ. ಈ ಸಮಯದಲ್ಲಿ ಪ್ರಜ್ವಲ್ ಶಿಫ್ಟ್ ಆದರೆ ಸಮಸ್ಯೆಯಾಗುತ್ತದೆ. ವಿಪಕ್ಷಗಳಿಗೆ ಆಹಾರವಾಗುವುದು ಬೇಡ. ರಾಜಕೀಯ ಒತ್ತಡದಿಂದ ಶಿಫ್ಟ್ ಆದರೆ ಸಮಸ್ಯೆಯಾಗಲಿದೆ ಎಂದು ಆ ಪ್ರಭಾವಿ ವ್ಯಕ್ತಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದಾರೆ. ಅಲ್ಲದೇ ತಕ್ಷಣ ಬೆಂಗಳೂರಿಗೆ ವಾಪಸ್ ಕರೆತರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಭಾವಿ ವ್ಯಕ್ತಿಯ ಕರೆಯಿಂದಾಗಿ ಪೊಲೀಸರು, ಮಾಅರ್ಗ ಮಧ್ಯೆಯೇ ವಾಪಸ್ ಆಗಿದ್ದಾರೆ. ಮತ್ತೆ ಪ್ರಜ್ವಲ್ ನನ್ನು ಪರಪ್ಪನ ಅಗ್ರಹಾರ ಜೈಲಿಗೆ ವಾಪಸ್ ಕರೆತರಲಾಗಿದೆ ಎಂದು ತಿಳಿದುಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿದ ಆ ಪ್ರಭಾವಿ ವ್ಯಕ್ತಿ ಯಾರು? ಪ್ರಜ್ವಲ್ ನನ್ನು ಪರಪ್ಪನ ಅಗ್ರಹಾರ ಜೈಲಿಗೆ ವಾಪಸ್ ಕರೆ ತರಲು ಹೇಳಿದ್ದಾದರೂ ಯಾಕೆ? ಎಂಬ ಚರ್ಚೆ ಇದೀಗ ಆರಂಭವಾಗಿದೆ.

