HomeEntertainmentಕರಾವಳಿ ವಿವಾದಕ್ಕೆ ಪ್ರಜ್ವಲ್ ದೇವರಾಜ್ ಬಿಗ್ ಟ್ವಿಸ್ಟ್ ನನ್ನ ಧ್ವನಿ ಬದಲಾಯಿಸಿ, ಸಿಕ್ಸ್‌ಪ್ಯಾಕ್ ನೆಪ ಒಡ್ಡಿದ್ರು:...

ಕರಾವಳಿ ವಿವಾದಕ್ಕೆ ಪ್ರಜ್ವಲ್ ದೇವರಾಜ್ ಬಿಗ್ ಟ್ವಿಸ್ಟ್ ನನ್ನ ಧ್ವನಿ ಬದಲಾಯಿಸಿ, ಸಿಕ್ಸ್‌ಪ್ಯಾಕ್ ನೆಪ ಒಡ್ಡಿದ್ರು: ಅಸಲಿ ಸತ್ಯ ಬಿಚ್ಚಿಟ್ಟ ನಟ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ಕರಾವಳಿ (Karavali) ಸಿನಿಮಾ ಸದ್ಯ ಗಾಂಧಿನಗರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಪ್ರಜ್ವಲ್ ದೇವರಾಜ್ ಗೈರಾಗಿದ್ದರ ಕುರಿತು ಹಾಗೂ ಚಿತ್ರತಂಡ ಮತ್ತು ನಟನ ನಡುವಿನ ಮುನಿಸಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹತ್ತಾರು ವದಂತಿಗಳು ಹರಿದಾಡುತ್ತಿದ್ದವು. ಇದೀಗ ಈ ಎಲ್ಲಾ ಗೊಂದಲಗಳಿಗೆ ಮತ್ತು ನಿರ್ದೇಶಕ ಗುರುದತ್ ಗಾಣಿಗ ಅವರ ಹೇಳಿಕೆಗಳಿಗೆ ನಟ ಪ್ರಜ್ವಲ್ ದೇವರಾಜ್ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ನೇರ ಹಾಗೂ ದಿಟ್ಟ ಉತ್ತರ ನೀಡಿದ್ದಾರೆ.ತಮ್ಮ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಹಾಗೂ ಸಂಭಾವನೆ ಬಾಕಿ ಉಳಿಸಿಕೊಂಡಿರುವುದೇ ಈ ವಿವಾದಕ್ಕೆ ಅಸಲಿ ಕಾರಣ ಎಂದು ಪ್ರಜ್ವಲ್ ಸ್ಪಷ್ಟಪಡಿಸಿದ್ದಾರೆ.

ನನ್ನ ಗಮನಕ್ಕೆ ತರದೆ ಧ್ವನಿ ಬದಲಾಯಿಸಿದ್ರು, ಸಂಭಾವನೆಯೂ ಕೊಟ್ಟಿಲ್ಲ.ಪ್ರಜ್ವಲ್ ದೇವರಾಜ್ ಅವರು ಬಿಡುಗಡೆ ಮಾಡಿರುವ ಅಧಿಕೃತ ಪತ್ರದಲ್ಲಿನ ಪ್ರಮುಖ ಅಂಶಗಳು ಹೀಗಿವೆ:

ಡಬ್ಬಿಂಗ್ ವಂಚನೆ: ಕರಾವಳಿ ಚಿತ್ರದ ಟ್ರೈಲರ್ ಬಿಡುಗಡೆಯಾದಾಗಲೇ ನನ್ನ ಪಾತ್ರಕ್ಕೆ ನನ್ನ ಪೂರ್ವಾನುಮತಿ, ಒಪ್ಪಿಗೆ ಅಥವಾ ಯಾವುದೇ ಮಾಹಿತಿ ಇಲ್ಲದೆ ಬೇರೆ ವ್ಯಕ್ತಿಯಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂಬ ಆಘಾತಕಾರಿ ವಿಷಯ ನನಗೆ ತಿಳಿಯಿತು.

ಸಂಭಾವನೆ ಬಾಕಿ: ಇದರೊಂದಿಗೆ ಚಿತ್ರತಂಡವು ಒಪ್ಪಿಕೊಂಡಿದ್ದ ನನ್ನ ಸಂಪೂರ್ಣ ಸಂಭಾವನೆಯನ್ನು ಸಹ ಪೂರ್ತಿಯಾಗಿ ಪಾವತಿಸಿರಲಿಲ್ಲ. ಇದೇ ಕಾರಣಗಳಿಗಾಗಿ ನಾನು ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೈಹಿಕ ಬದಲಾವಣೆ ಸುಳ್ಳು: ನನ್ನ ಸಿಕ್ಸ್ ಪ್ಯಾಕ್ ಲುಕ್ ಅಥವಾ ದೈಹಿಕ ಬದಲಾವಣೆಯ ಕಾರಣದಿಂದಾಗಿ ಈ ವಿವಾದ ಉಂಟಾಗಿದೆ ಎಂದು ಹರಡಿಸಲಾದ ಹೇಳಿಕೆಗಳು ಸಂಪೂರ್ಣ ಸುಳ್ಳು.

ನನ್ನ ನಿಲುವು ಮೊದಲಿನಿಂದಲೂ ಸ್ಪಷ್ಟವಾಗಿತ್ತು. ಬಾಕಿ ಇರುವ ಸಂಭಾವನೆ ಸಿಕ್ಕ ತಕ್ಷಣವೇ ನಾನು ಡಬ್ಬಿಂಗ್ ಮತ್ತು ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಲು ಸಿದ್ಧನಿದ್ದೆ. ಆದರೆ, ಜಿಎಸ್‌ಟಿ ಹೊರತುಪಡಿಸಿ ಬಾಕಿ ಹಣ ಪಾವತಿಸಿದ ನಂತರ, ಗುರುದತ್ ಗಾಣಿಗ ಫಿಲ್ಮ್ಸ್ ಸಂಸ್ಥೆಯು ನನ್ನ ಮ್ಯಾನೇಜರ್‌ಗೆ ಕರೆ ಮಾಡಿ, ‘ನಿಮ್ಮ ಡಬ್ಬಿಂಗ್ ಸೇವೆ ಮತ್ತು ಪ್ರಚಾರದ ಅಗತ್ಯ ನಮಗಿಲ್ಲ ಎಂದು ತಿಳಿಸಿತು. ಹೀಗಾಗಿ ಪ್ರಚಾರದಲ್ಲಿ ನಾನು ಭಾಗವಹಿಸದೇ ಇರುವುದು ನನ್ನ ಸ್ವಂತ ನಿರ್ಧಾರವಾಗಿರಲಿಲ್ಲ, ಚಿತ್ರತಂಡವೇ ನನ್ನನ್ನು ದೂರವಿಟ್ಟಿತು ಎಂದು ಪ್ರಜ್ವಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಒಬ್ಬ ಕಲಾವಿದನಾಗಿ ನನ್ನ ಸ್ವಂತ ಪಾತ್ರಕ್ಕೆ ಡಬ್ಬಿಂಗ್ ಮಾಡಲು ನನಗೆ ಅವಕಾಶ ನೀಡದಿರುವುದು ಮತ್ತು ನನ್ನ ಧ್ವನಿಯ ಸೂಕ್ತತೆಯ ಬಗ್ಗೆ ಸಾರ್ವಜನಿಕವಾಗಿ ಕಾಮೆಂಟ್ ಮಾಡಿರುವುದು ಒಬ್ಬ ಆರ್ಟಿಸ್ಟ್ ಆಗಿ ನನಗೆ ತೀವ್ರ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

ಕನ್ನಡಿಗರಲ್ಲಿ ಪ್ರಜ್ವಲ್ ವಿಶೇಷ ಮನವಿ

ಈ ಹೇಳಿಕೆಯೊಂದಿಗೆ ತಮ್ಮ ಕಡೆಯಿಂದ ಈ ವಿವಾದದ ಚರ್ಚೆಗೆ ಪೂರ್ಣವಿರಾಮ ಇಟ್ಟಿರುವ ಪ್ರಜ್ವಲ್ ದೇವರಾಜ್, ಒಬ್ಬ ಕಲಾವಿದನಾಗಿ ಕನ್ನಡ ಚಿತ್ರರಂಗ ಯಾವಾಗಲೂ ನನ್ನ ಮೊದಲ ಆದ್ಯತೆ. ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ ನಾನು ಕರಾವಳಿ ಚಿತ್ರದ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ನನ್ನ ಪ್ರೀತಿಯ ಅಭಿಮಾನಿಗಳು ಮತ್ತು ಕನ್ನಡ ಚಿತ್ರಪ್ರೇಮಿಗಳು ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಿ, ಇಡೀ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದು ದೊಡ್ಡ ಗುಣ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಷ್ಟದ ಸಮಯದಲ್ಲಿ ತಮಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular