ಹನೋಯ್: ವಿಯೆಟ್ನಾಂನ ಫು ಕ್ವಾಕ್ ದ್ವೀಪದಲ್ಲಿ 32 ಮಂದಿ ಭಾರತೀಯ ಪ್ರವಾಸಿಗರಿದ್ದ ಬೋಟ್ ಮುಳುಗಡೆಯಾಗಿ ಮಹಾದುರಂತ ಸಂಭವಿಸಿದ್ದು, ಘಟನೆಯಲ್ಲಿ 15 ಭಾರತೀಯರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಓಷನ್ ಪರ್ಲ್ ಐಲ್ಯಾಂಡ್ ಕಂಪನಿ ನಿರ್ವಹಿಸುತ್ತಿದ್ದ ಬೋಟ್ ಇದಾಗಿದ್ದು, ಬೋಟ್ ನಲ್ಲಿ 32 ಭಾರತೀಯ ಪ್ರವಾಸಿಗರು ಹಾಗೂ ಸಿಬ್ಬಂದಿಗಳು ಸೇರಿ ಒಟ್ಟು 36 ಜನರು ಇದ್ದರು, ಫು ಕ್ವಾಕ್ ದ್ವೀಪದ ಬಳಿ ಬೋಟ್ ಮಗುಚಿ ಬಿದ್ದಿದೆ. ಘಟನೆಯಲ್ಲಿ 15 ಭಾರತೀಯರು ಮೃತಪಟ್ತಿದ್ದು, 21 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೋಟ್ ದುರಂತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತಪಟ್ಟವರೆಲ್ಲರೂ ಆಂಧ್ರಪ್ರದೇಶದವರು ಎಂದು ತಿಳಿದುಬಂದಿದೆ. ಸಾವನ್ನಪ್ಪಿದವರಲ್ಲಿ ಒಂದೇ ಕುಟುಂಬದ ನಾಲ್ವರು ಕೂಡ ಇದ್ದಾರೆ. ಆಂಧ್ರಪ್ರದೇಶದ ಐವರು ಹಾಗೂ ತಮಿಳುನಾಡಿನ 17 ಜನರನ್ನು ರಕ್ಷಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿಸಲಾಗಿದೆ.
ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದೆ. ಅಲ್ಲದೇ ಕಂಟ್ರೋಲ್ ರೂಮ್‌ಗಳನ್ನ ಸ್ಥಾಪಿಸಿದ್ದು, ಸಹಾಯವಾಣಿ ಸಹ ಬಿಡುಗಡೆ ಮಾಡಿದೆ.

