ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಬೆಳೆ ಉಳಿಸಿಕೊಳ್ಳಲು ಕೃಷಿ ಪಂಪ್ ಸೆಟ್ ಗಳು ನೆರವಾಗಿವೆ. ಆದರೆ ಕೃಷಿ ಪಂಪ್ ಸೆಟ್ ಗಳಿಗೆ ಒಂದು ಗಂಟೆ ವಿದ್ಯುತ್ ಕಡಿತ ಮಾಡಲಾಗುವುದು. ಠೇವಣಿ ಕಟ್ಟದ ಐಪಿ ಸೆಟ್ ಗಳ ವಿದ್ಯುತ್ ಸಂಪರ್ಕವನ್ನು ಕೂಡ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿನ ಭೀಕರ ಬರಗಾಲ ಮತ್ತು ತೀವ್ರ ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ ಪೂರೈಕೆಯಲ್ಲಿ ಕಡಿತ ಮಾಡಲಾಗಿದೆ. ಇದರಿಂದ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ವಿಧಾನ ಪರಿಷತ್ ನಲ್ಲಿ ಬುಧವಾರ ಬರದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ಕೃಷಿ ಪಂಪ್ಸೆಟ್ ಗಳಿಗೆ ಒಂದು ತಾಸು ವಿದ್ಯುತ್ ಕಡಿತ ಮಾಡಲಾಗುವುದು. ಈ ಹಿಂದೆ ನೀಡುತ್ತಿದ್ದ 7 ಗಂಟೆಗಳ ಬದಲು 6 ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುವುದು ಎಂದು ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಬರದ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸದಸ್ಯರಾದ ಚಿದಾನಂದ ಗೌಡ, ಪಿ.ಹೆಚ್. ಪೂಜಾರ್ ಮೊದಲಾದವರು ವಿದ್ಯುತ್ ಕಡಿತದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಪ್ರತಿಕ್ರಿಯೆ ನೀಡಿದ ಸಚಿವ ಜಾರ್ಜ್, ರಾಜ್ಯದ ವಿದ್ಯುತ್ ಬೇಡಿಕೆ ಸದ್ಯ 20,000 ಮೆಗಾ ವ್ಯಾಟ್ ದಾಟಿದ್ದು, ಇದಕ್ಕೆ ತಕ್ಕಂತೆ ಹೆಚ್ಚುವರಿ ವಿದ್ಯುತ್ ಲಭ್ಯವಿಲ್ಲದ ಕಾರಣ ವಿದ್ಯುತ್ ಕಡಿತಗೊಳಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಹೊರ ರಾಜ್ಯಗಳಿಂದ ವಿನಿಮಯ ಆಧಾರದಲ್ಲಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಒಪ್ಪಂದದ ಪ್ರಕಾರ ಈ ತಿಂಗಳ ಅಂತ್ಯದವರೆಗೆ ಹರಿಯಾಣ, ಪಂಜಾಬ್, ಛತ್ತೀಸ್ಗಡ, ಉತ್ತರ ಪ್ರದೇಶಕ್ಕೆ ವಿದ್ಯುತ್ ಹಿಂತಿರುಗಿಸಬೇಕಿದೆ. ನಂತರ ವಿದ್ಯುತ್ ಪೂರೈಕೆಯ ಸಮಸ್ಯೆ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಸದಸ್ಯ ಪಿ.ಹೆಚ್. ಪೂಜಾರ್ ಅವರು, ಪ್ರತಿದಿನ ಮೂರರಿಂದ ನಾಲ್ಕು ಗಂಟೆ ಮಾತ್ರ ವಿದ್ಯುತ್ ನೀಡುತ್ತಿರುವುದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ಸೌರ ಮತ್ತು ಪವನ ವಿದ್ಯುತ್ ನಿಂದ ಹಗಲಿನಲ್ಲಿ ಸಮಸ್ಯೆಯಾಗುತ್ತಿಲ್ಲ. ಬರದಿಂದ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು, ಸದ್ಯ ಕೃಷಿ ಪಂಪ್ಸೆಟ್ ಗಳಿಗೆ ಒಂದು ತಾಸು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಇಂಧನ ಸಚಿವರು ಹೇಳಿದ್ದಾರೆ.
ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು, ಟಿಸಿ ರಿಪೇರಿಗೆ ರೈತರು ತಿಂಗಳುಗಟ್ಟಲೆ ಅಲೆಯುವಂತಾಗಿದೆ. ಸಂಜೆ 4 ರಿಂದ ರಾತ್ರಿ 9ರ ಅವಧಿಯಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಬಾರದು ಎಂದು ಬಿಜೆಪಿ ಸದಸ್ಯ ಚಿದಾನಂದ ಗೌಡ ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕೆ.ಜೆ. ಜಾರ್ಜ್, ರಾಜ್ಯದಲ್ಲಿ ವಿದ್ಯುತ್ ಪರಿವರ್ತಕಗಳ ಬ್ಯಾಂಕ್ ಸ್ಥಾಪಿಸಲಾಗಿದೆ. ನಗರ ಪ್ರದೇಶಗಳಲ್ಲಿ 24 ಗಂಟೆಯೊಳಗೆ, ಗ್ರಾಮೀಣ ಪ್ರದೇಶದಲ್ಲಿ 72 ಗಂಟೆಯೊಳಗೆ ಟ್ರಾನ್ಸ್ ಫಾರ್ಮರ್ ಗಳನ್ನು ಬದಲಿಸಿ ಕೊಡಲಾಗುತ್ತಿದೆ. ಕೃಷಿ ಪಂಪ್ಸೆಟ್ ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ಸಬ್ಸಿಡಿಗೆ ವಾರ್ಷಿಕ 24,000 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಕ್ರಮ ಸಕ್ರಮ ಯೋಜನೆ ಅಡಿ 4.5ಲಕ್ಷ ಕೃಷಿ ಪಂಪ್ಸೆಟ್ ಗಳಲ್ಲಿ 3.50 ಲಕ್ಷ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ನಿಗದಿತ ಠೇವಣಿ ಪಾವತಿಸದ ಪಂಪ್ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಅನಧಿಕೃತವಾಗಿ ಸಂಪರ್ಕ ಪಡೆದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

