ಮುಂಬೈ: ತಮ್ಮ ವಿವಾದಾತ್ಮಕ ಹೇಳಿಕೆಗಳು ಮತ್ತು ಬೋಲ್ಡ್ ವಿಡಿಯೋಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಪುನಮ್ ಪಾಂಡೆ, ಮತ್ತೆ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ. ತಾವು ಮಾಡುವ ಬೋಲ್ಡ್ ಹಾಗೂ ಇರೊಟಿಕ್ ವಿಡಿಯೋಗಳು ಕೇವಲ ಮನರಂಜನೆಯಲ್ಲ, ಬದಲಿಗೆ ಅದು ಒಂದು ರೀತಿಯ ‘ಸಾಮಾಜಿಕ ಸೇವೆ’ ಎಂದು ಕರೆದುಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಆರ್‌ವಿಸಿಜೆ ಮೂವೀಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಪ್ರಸ್ತುತ ಸಮಾಜದಲ್ಲಿ ಪುರುಷರು ತೀವ್ರ ಮಾನಸಿಕ ಒತ್ತಡ ಮತ್ತು ನಿರಾಶೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ ತಮ್ಮ ವಿಡಿಯೋಗಳು ಅವರ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತವೆ. ಇದರಿಂದ ಮಾನಸಿಕ ನಿರಾಳತೆ ಸಿಗುತ್ತದೆ ಎಂದಾದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ತಾವು ನಿರ್ಮಿಸುವ ವಿಡಿಯೋಗಳನ್ನು ಅತ್ಯಂತ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದ್ದು, ಇವು ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಜನರಿಗೆ ನೆರವಾಗುತ್ತಿವೆ ಎಂದು ಪ್ರತಿಪಾದಿಸಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತದಲ್ಲಿ ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳನ್ನು ತಡೆಯಲು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೇಶ್ಯಾವಾಟಿಕೆಗೆ ಕಾನೂನಿನ ಮಾನ್ಯತೆ ಸಿಕ್ಕರೆ ದೇಶದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅಪರಾಧಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ ಎಂಬುದು ಅವರ ವಾದ.
ಇನ್ನು ತಮ್ಮ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ತೀವ್ರ ಟೀಕೆ ಮತ್ತು ಟ್ರೋಲ್ಗಳ ಬಗ್ಗೆಯೂ ಪುನಮ್ ಬಹಿರಂಗವಾಗಿ ಮಾತನಾಡಿದ್ದಾರೆ. ಸಾರ್ವಜನಿಕವಾಗಿ ತಮ್ಮನ್ನು ಗೇಲಿ ಮಾಡುವ ಅನೇಕ ಪ್ರಮುಖ ವ್ಯಕ್ತಿಗಳು ಮತ್ತು ನಟ-ನಟಿಯರು, ಖಾಸಗಿಯಾಗಿ ತಮ್ಮ ವಿಡಿಯೋಗಳನ್ನು ವೀಕ್ಷಿಸುತ್ತಾರೆ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಕೆಟ್ಟದಾಗಿ ಬರೆಯುವವರ ವಿರುದ್ಧ ಕೆಲವೊಮ್ಮೆ ತೀವ್ರ ಕೋಪ ಬಂದರೂ, ತಮ್ಮ ಗೌರವ ಮತ್ತು ಮಟ್ಟವನ್ನು ಕಾಯ್ದುಕೊಳ್ಳಲು ತಾವು ಸೌಜನ್ಯದಿಂದ ಸುಮ್ಮನಿರುವುದಾಗಿ ಹೇಳಿದ್ದಾರೆ.
2022 ರಲ್ಲಿ ಕಂಗನಾ ರಣಾವತ್ ನಡೆಸಿಕೊಡುತ್ತಿದ್ದ ‘ಲಾಕ್ ಅಪ್’ ರಿಯಾಲಿಟಿ ಶೋನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪುನಮ್ ಪಾಂಡೆ, ಸದ್ಯ ತಮ್ಮದೇ ಆದ ಸ್ವತಂತ್ರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಈ ಇತ್ತೀಚಿನ ಹೇಳಿಕೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
“>

