ಬೆಂಗಳೂರು: ಪೊಲೀಸ್ ಇಲಾಖೆಯ 80 ಕೋಟಿ ರೂಪಾಯಿ ಆಸ್ತಿ ಕಬಳಿಕೆ ಯತ್ನ ನಡೆದಿದೆ. ಪೊಲೀಸ್ ವಸತಿಗೃಹಕ್ಕೆ ಖಾಸಗಿ ವ್ಯಕ್ತಿ ಹೆಸರಿನಲ್ಲಿ ಕರೆಂಟ್ ಬಿಲ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಘಟನೆ ಸಂಬಂಧ ಮಲ್ಲೇಶ್ವರಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಬೆಸ್ಕಾಂ, ಜಿಬಿಎ ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಳೆ ಮಲ್ಲೇಶ್ವರಂ ಪೊಲೀಸ್ ಠಾಣೆ ಮತ್ತು ಪೊಲೀಸ್ ಕ್ವಾರ್ಟರ್ಸ್ ಜಾಗವನ್ನು ಕಬಳಿಸಲು ಯತ್ನ ನಡೆದಿದೆ. ನೂರು ವರ್ಷಕ್ಕೂ ಹೆಚ್ಚು ಕಾಲದ ಜಾಗ ಕಬಳಿಸಲು ಖಾಸಗಿ ವ್ಯಕ್ತಿಗಳು ಪ್ರಯತ್ನ ನಡೆಸಿದ್ದಾರೆ. 1913ರ ಮಾಪನ ನಕ್ಷೆಯಲ್ಲಿ ಪೊಲೀಸ್ ವಸತಿಗೃಹ ಎಂದು ಜಾಗ ಇದೆ. ವಸತಿಗೃಹದಲ್ಲಿ ಈಗಲೂ ನಾಲ್ವರು ಪೊಲೀಸ್ ಇನ್ಸ್ ಪೆಕ್ಟರ್ ಕುಟುಂಬಗಳು ವಾಸವಾಗಿದೆ. ಇತ್ತೀಚೆಗೆ ವಿದ್ಯುತ್ ಬಿಲ್ ಬಂದಾಗ ಖಾಸಗಿ ವ್ಯಕ್ತಿ ಹೆಸರು ನಮೂದಾಗಿರುವುದು ಗೊತ್ತಾಗಿದೆ.
ಲೋಕಾಯುಕ್ತ ಇನ್ಸ್ಪೆಕ್ಟರ್ ಕುಮಾರ್ ಮನೆಗೆ ವಿದ್ಯುತ್ ಬಿಲ್ ಬಂದಿದೆ. ಮಹಾಲಕ್ಷ್ಮಿ ಎಂಬಾಕೆಯ ಹೆಸರಿನಲ್ಲಿ ವಿದ್ಯುತ್ ಬಿಲ್ ಬಂದಿದ್ದು, ಈ ವೇಳೆ ಸಂಬಂಧಪಟ್ಟ ಕಚೇರಿಗೆ ಹೋಗಿ ಕುಮಾರ್ ವಿಚಾರಿಸಿದ್ದಾರೆ. ಈ ವೇಳೆ ಅಕ್ರಮವಾಗಿ ಮಹಾಲಕ್ಷ್ಮಿ ಹೆಸರಿಗೆ ದಾಖಲೆಗಳನ್ನು ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳಿದ್ದರೂ ಖಾಲಿ ಮಾಡಿಸುತ್ತೇನೆ ಎಂದು ಮಹಿಳೆಯ ಕಡೆಯವರು ಧಮ್ಕಿ ಹಾಕಿದ್ದಾರೆ. ಜಿಬಿಎ ಅಧಿಕಾರಿಗಳು ಅಕ್ರಮವಾಗಿ ಇ-ಖಾತಾ ಮಾಡಿಸಿದ್ದು ಕೂಡ ಬೆಳಕಿಗೆ ಬಂದಿದೆ.
ಕೃಷ್ಣಮೂರ್ತಿ ಎಂಬಾತನಿಗೆ ಅಗ್ರಿಮೆಂಟ್ ಆಫ್ ಸೇಲ್ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಲೋಕಾಯುಕ್ತ ಇನ್ಸ್ಪೆಕ್ಟರ್ ಕುಮಾರ್ ಅವರಿಂದ ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿದ ಮಲ್ಲೇಶ್ವರಂ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

