HomeKarnatakaಹೊಸ ಸವಾಲುಗಳಿಗೆ ತಕ್ಕಂತೆ ಪೊಲೀಸ್ ಇಲಾಖೆ ಕರ್ತವ್ಯ, ಹುದ್ದೆ ನೇಮಕಾತಿ ನಿಯಮಗಳ ಸಮಗ್ರ ಪರಿಶೀಲನೆಗೆ ತಜ್ಞರ...

ಹೊಸ ಸವಾಲುಗಳಿಗೆ ತಕ್ಕಂತೆ ಪೊಲೀಸ್ ಇಲಾಖೆ ಕರ್ತವ್ಯ, ಹುದ್ದೆ ನೇಮಕಾತಿ ನಿಯಮಗಳ ಸಮಗ್ರ ಪರಿಶೀಲನೆಗೆ ತಜ್ಞರ ಸಮಿತಿ ರಚನೆ

ಬೆಂಗಳೂರು: ಪೊಲೀಸ್ ಇಲಾಖೆಯ ಪ್ರಸ್ತುತ ಕಾರ್ಯಭಾರ, ಬದಲಾಗುತ್ತಿರುವ ಕರ್ತವ್ಯಗಳು ಹಾಗೂ ಭವಿಷ್ಯದಲ್ಲಿ ಎದುರಾಗಲಿರುವ ಅಗತ್ಯಗಳಿಗೆ ಅನುಗುಣವಾಗಿ ಇಲಾಖೆಯ ವೃಂದ ರಚನೆ, ಹುದ್ದೆಗಳ ವರ್ಗೀಕರಣ, ಹುದ್ದೆಗಳ ಸಂಖ್ಯೆ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಶಿಫಾರಸುಗಳನ್ನು ನೀಡಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ.

ಪೊಲೀಸ್ ಇಲಾಖೆಯ ಕರ್ತವ್ಯಗಳ ಸ್ವರೂಪದಲ್ಲಿ ನಿರಂತರ ಬದಲಾವಣೆಗಳಾಗುತ್ತಿದ್ದು, ಹೊಸ ಸವಾಲುಗಳು ಮತ್ತು ಹೆಚ್ಚುತ್ತಿರುವ ಜವಾಬ್ದಾರಿಗಳಿಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ವೃಂದ ರಚನೆ ಹಾಗೂ ಹುದ್ದೆಗಳ ಮಂಜೂರಾತಿ ಬಲವನ್ನು ಸಮಗ್ರವಾಗಿ ಪರಿಶೀಲಿಸುವುದರ ಜೊತೆಗೆ, ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಇಲಾಖೆಯ ಮಾನವ ಸಂಪನ್ಮೂಲ ಯೋಜನೆಯನ್ನು ರೂಪಿಸುವ ಉದ್ದೇಶದಿಂದ ಈ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆ ಹಾಗೂ ಅರ್ಹತಾ ಮಾನದಂಡಗಳನ್ನು ಪುನರ್‌ ನಿಗದಿಪಡಿಸುವುದು, ತರಬೇತಿ ಮತ್ತು ಸಾಮರ್ಥ್ಯವೃದ್ಧಿ ವ್ಯವಸ್ಥೆಯನ್ನು ಬಲಪಡಿಸುವುದು ಸೇರಿದಂತೆ ಪೊಲೀಸ್ ಸಿಬ್ಬಂದಿಯ ವೃತ್ತಿಪರ ಬೆಳವಣಿಗೆಗೆ ಅಗತ್ಯ ಕ್ರಮಗಳ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ. ಕೆಪಿಎ, ಮೈಸೂರು ಹಾಗೂ ಇತರೆ ತರಬೇತಿ ಘಟಕಗಳ ಬಲವರ್ಧನೆಯ ಬಗ್ಗೆಯೂ ಸಮಿತಿ ಅಧ್ಯಯನ ನಡೆಸಲಿದೆ. ವಿವಿಧ ಹಂತದ ಹುದ್ದೆಗಳಲ್ಲಿ ಬಡ್ತಿ ಅವಕಾಶ, ವೃತ್ತಿಜೀವನದ ಪ್ರಗತಿ ಹಾಗೂ ಹುದ್ದೆಗಳ ಚಲನಶೀಲತೆಯನ್ನು ಪರಿಶೀಲಿಸುವುದರ ಜೊತೆಗೆ, ಹೊಸ ಹುದ್ದೆಗಳ ಸೃಜನೆ ಮತ್ತು ಅಸ್ತಿತ್ವದಲ್ಲಿರುವ ಹುದ್ದೆಗಳ ಮರುವರ್ಗೀಕರಣದ ಅಗತ್ಯವಿದೆಯೇ ಎಂಬುದನ್ನೂ ಸಮಿತಿ ಪರಿಶೀಲಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೀಸಲಾತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಹುದ್ದೆಗಳ ವಿನ್ಯಾಸವನ್ನು ಪರಿಶೀಲಿಸುವುದು, ಮುಂದಿನ ವರ್ಷಗಳ ಮಾನವ ಸಂಪನ್ಮೂಲ ಅಗತ್ಯಕ್ಕೆ ಅನುಗುಣವಾಗಿ ನೇಮಕಾತಿ ಯೋಜನೆ ರೂಪಿಸುವುದು ಹಾಗೂ ನೇರ ನೇಮಕಾತಿ ಮತ್ತು ಮುಂಬಡ್ತಿಯ ಹುದ್ದೆಗಳ ನಡುವಿನ ಸೂಕ್ತ ಅನುಪಾತವನ್ನು ಪರಿಶೀಲಿಸುವುದೂ ಸಮಿತಿಯ ಜವಾಬ್ದಾರಿಯಾಗಿದೆ. ಇದರ ಜೊತೆಗೆ, ಪೊಲೀಸ್ ಇಲಾಖೆಯ ಅಧೀನದಲ್ಲಿರುವ ವಾಹನ ಚಾಲಕರು ಹಾಗೂ ಸಣ್ಣಪುಟ್ಟ ವರ್ಗದ ನೌಕರರಿಗೆ ಸೃಜಿಸಲಾಗಿರುವ ಹುದ್ದೆಗಳ ಕುರಿತೂ ಪರಿಶೀಲನೆ ನಡೆಸುವಂತೆ ಸಮಿತಿಗೆ ಸೂಚಿಸಲಾಗಿದೆ.

ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದ ಈ ಸಮಿತಿಯು ಪೊಲೀಸ್ ಇಲಾಖೆಯ ವೃಂದ ಮತ್ತು ನೇಮಕಾತಿಗೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅಗತ್ಯ ಶಿಫಾರಸುಗಳೊಂದಿಗೆ ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ವೈಜ್ಞಾನಿಕವಾಗಿ ಅಂದಾಜಿಸಿ, ಸರಿಯಾದ ಹುದ್ದೆ ವಿನ್ಯಾಸ, ಪರಿಣಾಮಕಾರಿ ನೇಮಕಾತಿ ವ್ಯವಸ್ಥೆ, ಸಮರ್ಪಕ ತರಬೇತಿ ಹಾಗೂ ಸಿಬ್ಬಂದಿಯ ವೃತ್ತಿಪರ ಬೆಳವಣಿಗೆಗೆ ಅವಕಾಶ ಕಲ್ಪಿಸುವ ಮೂಲಕ ಇಲಾಖೆಯನ್ನು ಮತ್ತಷ್ಟು ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ಆಧುನೀಕರಣ ಸಮಿತಿ

ಕರ್ನಾಟಕ ಪೊಲೀಸ್ ಇಲಾಖೆಯನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸುವ ಹಾಗೂ ಆಧುನಿಕ ತಂತ್ರಜ್ಞಾನಗಳ ಸಮರ್ಪಕ ಬಳಕೆಯೊಂದಿಗೆ ಇಲಾಖೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪೊಲೀಸ್ ಆಧುನೀಕರಣ ಸಮಿತಿಯನ್ನು ರಚಿಸಲಾಗಿದೆ.

ಅಪರಾಧಗಳ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳು, ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆ, ಸೈಬರ್ ಅಪರಾಧಗಳ ಹೆಚ್ಚಳ ಹಾಗೂ ಹೊಸ ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಮೂಲಸೌಕರ್ಯ, ಸಂವಹನ ವ್ಯವಸ್ಥೆ, ಸೈಬರ್ ಸಾಮರ್ಥ್ಯ, ತರಬೇತಿ, ಪೊಲೀಸ್ ವಸತಿ ಮತ್ತು ಸಿಬ್ಬಂದಿ ಕಲ್ಯಾಣ ಸೇರಿದಂತೆ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಪ್ರಸ್ತುತ ಮೂಲಸೌಕರ್ಯ ಮತ್ತು ಉಪಕರಣಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ತುರ್ತು ಅಗತ್ಯಗಳನ್ನು ಗುರುತಿಸಿ, ಮುಂದಿನ ವರ್ಷಗಳಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಬಹುದಾದ ಆಧುನೀಕರಣ ಯೋಜನೆಯನ್ನು ರೂಪಿಸಲು ಸಮಿತಿಯನ್ನು ರಚಿಸಲಾಗಿದೆ.

ಸಾರ್ವಜನಿಕರಿಗೆ ತುರ್ತು ಪ್ರತಿಕ್ರಿಯೆ ನೀಡುವ ವ್ಯವಸ್ಥೆ, ನಿಯಂತ್ರಣ ಕೊಠಡಿಗಳು ಹಾಗೂ 112 ಸೇವೆಗಳ ಉನ್ನತೀಕರಣ ಸಾಧ್ಯತೆಗಳನ್ನು ಸಮಿತಿ ಪರಿಶೀಲಿಸಲಿದೆ. ಜೊತೆಗೆ ವಿಧಿವಿಜ್ಞಾನ ಪ್ರಯೋಗಾಲಯದ ಬಲವರ್ಧನೆ, ಪೊಲೀಸ್ ಇಲಾಖೆಯ ವಾಹನಗಳು ಹಾಗೂ ಇತರೆ ಚಾಲನೆಯಲ್ಲಿರುವ ಸೌಲಭ್ಯಗಳ ಅಗತ್ಯತೆಗಳನ್ನೂ ಅಧ್ಯಯನ ಮಾಡಲಿದೆ.

ಪೊಲೀಸ್ ಇಲಾಖೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಸಾಧ್ಯತೆಗಳು, ಇಲಾಖೆಯ ವಿವಿಧ ಕಾರ್ಯಗಳ ಗಣಕೀಕರಣ, ಹಾರ್ಡ್‌ವೇರ್ ಮತ್ತು ಸಂಪರ್ಕ ಸಾಧನಗಳ ಅವಶ್ಯಕತೆ, ನಾಗರಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಪೊಲೀಸ್ ತರಬೇತಿ ಅಕಾಡೆಮಿಗಳ ಸ್ಥಾಪನೆ, ಕಾನೂನು ಮತ್ತು ಸುವ್ಯವಸ್ಥೆಗಾಗಿ ಆಧುನಿಕ ಪರಿಕರಗಳು ಹಾಗೂ ವ್ಯವಸ್ಥೆಗಳ ಅಳವಡಿಕೆ ಕುರಿತೂ ಸಮಿತಿ ಪರಿಶೀಲನೆ ನಡೆಸಲಿದೆ. ಇದರ ಜೊತೆಗೆ, ಮುಂದಿನ ವರ್ಷಗಳಲ್ಲಿ ಆಧ್ಯತೆ ಆಧಾರಿತ ಆರ್ಥಿಕತೆಗೆ ಸುಸಜ್ಜಿತವಾದ ಸಮಗ್ರ ಪೊಲೀಸ್ ಆಧುನೀಕರಣ ಯೋಜನೆಯನ್ನು ರೂಪಿಸುವುದು ಸಮಿತಿಯ ಪ್ರಮುಖ ಜವಾಬ್ದಾರಿಯಾಗಿದೆ.

ಸಮಿತಿಯು ಮೇಲ್ಕಂಡ ವಿಷಯಗಳ ಕುರಿತು ಸಮಗ್ರ ಅಧ್ಯಯನ ನಡೆಸಿ, ಅಗತ್ಯ ಶಿಫಾರಸುಗಳೊಂದಿಗೆ ಎರಡು ತಿಂಗಳೊಳಗೆ ವರದಿ ಸಲ್ಲಿಸಲಿದೆ.

ಪೊಲೀಸ್ ಇಲಾಖೆಯ ಆಧುನೀಕರಣವೆಂದರೆ ಕೇವಲ ಹೊಸ ಉಪಕರಣಗಳ ಖರೀದಿಗೆ ಸೀಮಿತವಾಗಿರಬಾರದು. ತಂತ್ರಜ್ಞಾನ, ಮಾನವ ಸಂಪನ್ಮೂಲ, ತರಬೇತಿ, ಮೂಲಸೌಕರ್ಯ, ಸಂವಹನ ವ್ಯವಸ್ಥೆ ಹಾಗೂ ನಾಗರಿಕ ಸೇವೆಗಳನ್ನು ಒಳಗೊಂಡ ಸಮಗ್ರ ದೃಷ್ಟಿಕೋನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯ ಶಿಫಾರಸುಗಳನ್ನು ಆಧರಿಸಿ, ಮುಂದಿನ ವರ್ಷಗಳಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಬಹುದಾದ, ಭವಿಷ್ಯದ ಅಗತ್ಯಗಳಿಗೆ ಸ್ಪಂದಿಸುವ ಸಮಗ್ರ ಪೊಲೀಸ್ ಆಧುನೀಕರಣ ಯೋಜನೆಯನ್ನು ರೂಪಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular