ಬೆಂಗಳೂರು: ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ ದಂಧೆಕೋರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು ಕಳೆದ ಒಂದು ತಿಂಗಳಲ್ಲಿ 17 ಪ್ರಕರಣ ದಾಖಲಿಸಿ 24 ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಬೇರೆ ಬೇರೆ ಮಾರ್ಗಗಳಿಂದ ಟಿಕೆಟ್ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಟ್ಟು 16 ಪ್ರಕರಣ ದಾಖಲಾಗಿವೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಒಂದು ಕೇಸ್ ದಾಖಲಾಗಿದೆ. ಬಂಧಿತ 24 ಆರೋಪಿಗಳ ಬಳಿ ಇದ್ದ 37 ಐಪಿಎಲ್ ಟಿಕೆಟ್ ಗಳನ್ನು ಸೀಜ್ ಮಾಡಲಾಗಿದೆ.
ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಬಂಧ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಕಳೆದು ಒಂದು ತಿಂಗಳಿನಿಂದ 5 ಐಪಿಎಲ್ ಪಂದ್ಯಗಳು ನಡೆದಿದ್ದವು. ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಲೀಗ್ ಪಂದ್ಯಗಳು ನಡೆದಿದ್ದವು. 37 ಐಪಿಎಲ್ ಟಿಕೆಟ್ ಗಳನ್ನು ಸೀಜ್ ಮಾಡಲಾಗಿದೆ.
ಶುಕ್ರವಾರ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಐಪಿಎಲ್ ಟಿಕೆಟ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 10 ಮಂದಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್, ಸಾಗರ್, ಕಿರಣ್, ಜೀವನ್, ಭರತೇಶ, ಶಶಿಕುಮಾರ್, ಸೋನು, ಶ್ರೀಕಾಂತ್ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ. ಕೆ.ಎಸ್.ಸಿ.ಎ. ಸದಸ್ಯರಿಗೆ ನೀಡಿದ ಕಾಂಪ್ಲಿಮೆಂಟರಿ ಟಿಕೆಟ್ ಗಳು ಮಾರಾಟವಾಗಿದ್ದು, ಮಫ್ತಿಯಲ್ಲಿ ಟಿಕೆಟ್ ಖರೀದಿಸುವವರ ಸೋಗಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ 10 ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಗೆ ಟಿಕೆಟ್ ನೀಡಿದವರ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

