ಬೆಳಗಿನ ಉಪಾಹಾರವು ದಿನದ ಅತ್ಯಂತ ಪ್ರಮುಖ ಆಹಾರವಾಗಿದೆ. ದಕ್ಷಿಣ ಭಾರತದಲ್ಲಿ ಇಡ್ಲಿ, ದೋಸೆ ಎಷ್ಟು ಪ್ರಸಿದ್ಧವೋ, ಉತ್ತರ ಭಾರತದಲ್ಲಿ ಪರೋಟ ಅಷ್ಟೇ ಜನಪ್ರಿಯ. ಸಾಮಾನ್ಯವಾಗಿ ನಾವು ಆಲೂಗಡ್ಡೆ ಅಥವಾ ಗೋಬಿ ಪರೋಟಗಳನ್ನು ಸವಿಯುತ್ತೇವೆ. ಆದರೆ ನೀವು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವವರಾಗಿದ್ದರೆ ಮತ್ತು ದೇಹಕ್ಕೆ ಹೆಚ್ಚಿನ ಪ್ರೋಟೀನ್ ಅವಶ್ಯಕತೆ ಇದ್ದರೆ, ಸೋಯಾ ಮತ್ತು ಕಡಲೆಬೇಳೆಯ ಪರೋಟ ಅತ್ಯುತ್ತಮ ಆಯ್ಕೆಯಾಗಬಲ್ಲದು.
ಸೋಯಾ ತುಂಡುಗಳು ಸಸ್ಯ ಆಧಾರಿತ ಪ್ರೋಟೀನ್‌ನ ಗಣಿಯಾಗಿದ್ದು, ಕಡಲೆಬೇಳೆಯು ನಾರಿನಂಶ ಮತ್ತು ಅಗತ್ಯ ವಿಟಮಿನ್‌ಗಳನ್ನು ಒದಗಿಸುತ್ತದೆ. ಇವೆರಡರ ಸಂಯೋಜನೆಯಿಂದ ತಯಾರಾಗುವ ಈ ಪರೋಟ ರುಚಿಯ ಜೊತೆಗೆ ದಿನವಿಡೀ ನಿಮ್ಮನ್ನು ಚಟುವಟಿಕೆಯಿಂದ ಇರಿಸಲು ಸಹಕಾರಿ.
ಬೇಕಾಗುವ ಸಾಮಗ್ರಿಗಳು ಗೋಧಿ ಹಿಟ್ಟು – 1 ಕಪ್ ಸೋಯಾ ತುಂಡುಗಳು – ಅರ್ಧ ಕಪ್ ಕಡಲೆಬೇಳೆ – ಅರ್ಧ ಕಪ್ ತುಪ್ಪ – 2 ಚಮಚ ಜೀರಿಗೆ – 1 ಚಮಚ ಹಸಿಮೆಣಸಿನಕಾಯಿ – 2 ತುರಿದ ಶುಂಠಿ – 1 ಚಮಚ ಅರಿಶಿನ ಮತ್ತು ಗರಂ ಮಸಾಲ – ತಲಾ ಅರ್ಧ ಚಮಚ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹಿಟ್ಟು ಕಲಿಸಲು ನೀರು.
ತಯಾರಿಸುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಚಿಟಿಕೆ ಉಪ್ಪು ಸೇರಿಸಿ, ನೀರು ಹಾಕಿ ಮೃದುವಾಗಿ ಕಲಸಿಕೊಳ್ಳಿ. ಈ ಹಿಟ್ಟು ಸುಮಾರು 15 ನಿಮಿಷಗಳ ಕಾಲ ನೆನೆಯಲು ಬಿಡಿ.
ನಂತರ ಸೋಯಾ ತುಂಡುಗಳನ್ನು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಕುದಿಸಿ, ಬಳಿಕ ತಣ್ಣೀರಿನಲ್ಲಿ ತೊಳೆದು ಅದರಲ್ಲಿರುವ ನೀರನ್ನು ಪೂರ್ತಿಯಾಗಿ ಹಿಂಡಿ ತೆಗೆಯಿರಿ. ಇದನ್ನು ಸಣ್ಣದಾಗಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಇನ್ನೊಂದೆಡೆ ಕಡಲೆಬೇಳೆಯನ್ನು ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ನೆನಪಿರಲಿ, ಬೇಳೆ ಅತಿಯಾಗಿ ಮೆತ್ತಗಾಗಬಾರದು.
ಈಗ ಒಲೆಯ ಮೇಲೆ ಬಾಣಲೆಯಿಟ್ಟು ತುಪ್ಪ ಹಾಕಿ. ಅದಕ್ಕೆ ಜೀರಿಗೆ, ಹೆಚ್ಚಿದ ಹಸಿಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ಬಾಡಿಸಿ. ಬಳಿಕ ಸಿದ್ಧಪಡಿಸಿಕೊಂಡ ಸೋಯಾ ಮತ್ತು ಬೇಳೆಯನ್ನು ಅದಕ್ಕೆ ಸೇರಿಸಿ. ನಂತರ ಅರಿಶಿನ, ಗರಂ ಮಸಾಲ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ಹದವಾಗಿ ಒಣಗಿದಾಗ ಒಲೆಯಿಂದ ಕೆಳಗಿಳಿಸಿ.
ಕಲಸಿಟ್ಟ ಗೋಧಿ ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ಲಟ್ಟಿಸಿ, ಅದರ ಮಧ್ಯದಲ್ಲಿ ತಯಾರಿಸಿದ ಹೂರಣವನ್ನು ತುಂಬಿ ಮಡಚಿ. ಇದನ್ನು ಮತ್ತೆ ಪರೋಟದಂತೆ ಲಟ್ಟಿಸಿ ಕಾದ ಹಂಚಿನ ಮೇಲೆ ಹಾಕಿ. ಎರಡೂ ಬದಿಯಲ್ಲಿ ತುಪ್ಪ ಸವರಿ ಹೊಂಬಣ್ಣ ಬರುವವರೆಗೆ ಬೇಯಿಸಿದರೆ ರುಚಿಕರವಾದ ಸೋಯಾ-ಕಡಲೆಬೇಳೆ ಪರೋಟ ಸಿದ್ಧ.
ಈ ಪರೋಟವನ್ನು ಬಿಸಿಬಿಸಿಯಾಗಿ ಮೊಸರು ಅಥವಾ ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಬಹುದು. ಜಿಮ್‌ಗೆ ಹೋಗುವವರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಇದು ಸೂಕ್ತವಾದ ಆಹಾರವಾಗಿದೆ.

